ADVERTISEMENT

ವಿಮಾನ ಪತನ ಉದ್ದೇಶಪೂರ್ವಕವಲ್ಲ: ತಪ್ಪೊಪ್ಪಿಕೊಂಡ ಇರಾನ್‌ನಿಂದ ಕ್ಷಮೆಯಾಚನೆ

ಪರಿಹಾರ ನೀಡುವಂತೆ ಉಕ್ರೇನ್‌ ಒತ್ತಾಯ

ಏಜೆನ್ಸೀಸ್
Published 11 ಜನವರಿ 2020, 20:00 IST
Last Updated 11 ಜನವರಿ 2020, 20:00 IST
ಪತನಗೊಂಡ ಉಕ್ರೇನ್‌ನ ಬೋಯಿಂಗ್‌ ವಿಮಾನದ ಅವಶೇಷಗಳು
ಪತನಗೊಂಡ ಉಕ್ರೇನ್‌ನ ಬೋಯಿಂಗ್‌ ವಿಮಾನದ ಅವಶೇಷಗಳು   

ಟೆಹರಾನ್‌: ಉಕ್ರೇನ್‌ನ ನಾಗರಿಕ ವಿಮಾನ ಪತನದ ಹೊಣೆಯನ್ನು ಇರಾನ್‌ ಹೊತ್ತುಕೊಂಡಿದೆ. 176 ಮಂದಿ ಸಾವಿಗೆ ಕಾರಣವಾಗಿರುವ ಈ ಪ್ರಮಾದ ಕ್ಷಮಾರ್ಹವಲ್ಲ ಎಂದಿರುವ ಇರಾನ್‌, ಉದ್ದೇಶಪೂರ್ವಕವಾಗಿ ಹೊಡೆದುರುಳಿಸಿದ್ದಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದೆ.

ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದ್ದು,ಅದು ವಿಮಾನವನ್ನು ಹೊಡೆದುರುಳಿಸಿದೆ. ಅಮಾಯಕರ ಸಾವಿಗೆ ಕಾರಣವಾಗಿದೆ ಎಂಬುದು ಸೇನೆಯು ನಡೆಸಿದ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಮಾದಕ್ಕೆ ಇರಾನ್‌ ಕ್ಷಮೆ ಕೋರುತ್ತದೆ.ದುರಂತಕ್ಕೆ ಕಾರಣರಾದವರ ಪತ್ತೆಗೆತನಿಖೆಯನ್ನು ಮುಂದುವರಿಸಲಾಗಿದೆ ಎಂದು ಅಧ್ಯಕ್ಷ ಹಸನ್‌ ರೌಹಾನಿ ಟ್ವೀಟ್‌ ಮಾಡಿದ್ದಾರೆ.

ಇರಾಕ್‌ನಲ್ಲಿ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾದ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಬುಧವಾರಕ್ಷಿಪಣಿ ಪ್ರಯೋಗಿಸಲಾಗಿತ್ತು ಎಂದು ಸೇನೆಯ ಅಧಿಕಾರಿ ಹೇಳಿದ್ದರು. ಈ ಹೇಳಿಕೆಯ ಹಿಂದೆಯೇ ರೌಹಾನಿ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ತನಿಖೆಗೆ ಆಹ್ವಾನ: ಅಮೆರಿಕದ ಪ್ರಚೋದನಾತ್ಮಕತೆಯು ಮಾನವ ಸಹಜ ತ‍ಪ್ಪಿಗೆ ಎಡೆಮಾಡಿಕೊಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜಾವೇದ್‌ ಜಾರೀಫ್‌ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ತನಿಖೆ ನಡೆಸುವಂತೆ ಅಮೆರಿಕ, ಉಕ್ರೇನ್‌, ಕೆನಡಾ ದೇಶಗಳಿಗೆ ಇರಾನ್‌ ಆಹ್ವಾನ ನೀಡಿದೆ.

ಶತ್ರುರಾಷ್ಟ್ರಗಳ ಬೆದರಿಕೆಗಳು ತೀವ್ರವಾಗಿದ್ದಾಗ ಬೋಯಿಂಗ್‌ 737 ವಿಮಾನವನ್ನು ‘ಶತ್ರು ಪಡೆ’ಯ ವಿಮಾನ ಎಂದು ಇರಾನ್‌ ಗ್ರಹಿಸಿದ್ದಾಗಿ ಸೇನೆಯ ಹೇಳಿಕೆಯನ್ನು ಇರಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಐಆರ್‌ಎನ್‌ಎಈ ಮೊದಲು ವರದಿಮಾಡಿತ್ತು. ಅಂತರರಾಷ್ಟ್ರೀಯ ಒತ್ತಡಗಳು ಹೆಚ್ಚಾದಾಗ ಇರಾನ್‌ ತನಿಖೆಗೆ ಮುಂದಾಗಿತ್ತು.

ಟೆಹರಾನ್‌ನಿಂದ ಹೊರಟಿದ್ದ ಯುಐಎ ಪಿಎಸ್‌ 752 ವಿಮಾನದಲ್ಲಿ ಇರಾನ್‌– ಕೆನಡಾದ ದ್ವಿ ಪೌರತ್ವ ಪಡೆದ ನಾಗರಿಕರು, ಉಕ್ರೇನ್‌, ಅಫ್ಗಾನಿಸ್ತಾನ್‌, ಸ್ವೀಡನ್‌, ಬ್ರಿಟನ್‌ ಪ್ರಜೆಗಳು ಇದ್ದರು. ದುರಂತದ ನಂತರ ಹಲವು ವಿಮಾನಯಾನ ಸಂಸ್ಥೆಗಳು ಇರಾನ್‌ನ ವಾಯು ಪ್ರದೇಶದ ಮೇಲೆ ಹಾರಾಟ ನಡೆಸುವುದನ್ನು ಮೊಟಕುಗೊಳಿಸಿವೆ.

ಶಿಕ್ಷೆಗೆ ಉಕ್ರೇನ್‌ ಅಧ್ಯಕ್ಷರ ಆಗ್ರಹ
ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಜಿಲೆನ್‌ಸ್ಕಿ ಅವರು ವಿಮಾನ ಪತನಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ಇರಾನ್‌ಗೆ ಆಗ್ರಹಿಸಿದ್ದಾರೆ. ಅಲ್ಲದೆ, ಪರಿಹಾರ ಮೊತ್ತವನ್ನು ಪಾವತಿಸುವಂತೆ ಫೇಸ್‌ಬುಕ್‌ನಲ್ಲಿ ಆಗ್ರಹಿಸಿದ್ದಾರೆ.

ತಪ್ಪಿತಸ್ಥರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂಬುದನ್ನು ಇರಾನ್‌ನಿಂದ ಬಯಸುತ್ತೇವೆ. ಅಂತೆಯೇ ಪರಿಹಾರವನ್ನು ಪಾವತಿಸಬೇಕು ಎಂದು ಟೆಹರಾನ್‌ಗೆ ಹೇಳಿದ್ದಾರೆ.

ನ್ಯೂನತೆ ಪತ್ತೆ: ಖೊಮೇನಿ ಸೂಚನೆ
ವಿಮಾನ ಪತನಕ್ಕೆ ಕಾರಣವಾದ ನ್ಯೂನತೆಗಳ ಪತ್ತೆಗೆ ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ ಸೇನಾಪಡೆಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ಈ ರೀತಿಯ ಪ್ರಮಾದವು ಮರುಕಳಿಸಬಾರದು ಎಂದು ತಮ್ಮ ಅಧಿಕೃತ ಜಾಲತಾಣದಲ್ಲಿ ಹೇಳಿಕೆಯನ್ನು ಅವರು ನೀಡಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

*
ದುರಂತಕ್ಕೆ ನಾವೇ ಜವಾಬ್ದಾರರು. ಇದನ್ನು ನೋಡಿ ಯಾಕಾದರೂ ಬದುಕಿರಬೇಕು ಎನ್ನಿಸಿತು. ಘಟನೆಯಿಂದ ನಾವು ಪಾಠ ಕಲಿತಿದ್ದೇವೆ.
-ಜನರಲ್‌ ಅಮೀರ್‌ ಅಲಿ ಹಾಜೀಜಾದೆ,ಕಮಾಂಡರ್‌, ರೆವಲ್ಯೂಷನರಿ ಗಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.