ADVERTISEMENT

‘ಮರಳಲು ಯತ್ನಿಸುತ್ತಿದ್ದಾಗ ಹೊತ್ತಿ ಉರಿದ ವಿಮಾನ’

ಇರಾನ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖ

ಏಜೆನ್ಸೀಸ್
Published 9 ಜನವರಿ 2020, 15:18 IST
Last Updated 9 ಜನವರಿ 2020, 15:18 IST
ಕೆನಡಾದ ಟೊರಾಂಟೊ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು –ರಾಯಿಟರ್ಸ್‌ ಚಿತ್ರ
ಕೆನಡಾದ ಟೊರಾಂಟೊ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು –ರಾಯಿಟರ್ಸ್‌ ಚಿತ್ರ   

ಟೆಹರಾನ್‌: ಉಕ್ರೇನ್‌ನ ಜೆಟ್‌ಲೈನರ್‌ ವಿಮಾನವು ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವೇಳೆ ಬೆಂಕಿಗೆ ಆಹುತಿಯಾಗಿ ಪತನಗೊಂಡಿದೆ ಎಂದು ಗುರುವಾರ ಇರಾನ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ವಿಮಾನ ಪತನವಾಗುವ ಮೊದಲು ಅದರಲ್ಲಿದ್ದ ಸಿಬ್ಬಂದಿ ಸಹಾಯಕ್ಕಾಗಿ ರೇಡಿಯೊ ಕರೆ ಮಾಡಿರಲಿಲ್ಲ ಎಂದೂ ತಿಳಿಸಿದೆ.

‘ಕ್ಷಿಪಣಿ ದಾಳಿ ಅಥವಾ ಭಯೋತ್ಪಾದಕರ ದುಷ್ಕೃತ್ಯದ ಪರಿಣಾಮ ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ’ ಎಂದು ಉಕ್ರೇನ್‌ ಹೇಳಿದೆ. ಆದರೆ ಇರಾನ್‌ನ ಸೇನೆಯ ಅಧಿಕಾರಿಗಳು ಇದನ್ನು ತಳ್ಳಿಹಾಕಿದ್ದಾರೆ.

ADVERTISEMENT

ಪತನವಾಗುವ ಮೊದಲು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ತನಿಖಾಧಿಕಾರಿಗಳು ದುರಂತದ ಬಗ್ಗೆ ಯಾವುದೇ ತಕ್ಷಣದ ವಿವರಣೆ ನೀಡಿಲ್ಲ.

ವಿಮಾನದ ಕಪ್ಪು ಪೆಟ್ಟಿಗೆಯ (ಬ್ಲ್ಯಾಕ್‌ ಬಾಕ್ಸ್‌) ಕೆಲವು ಭಾಗಗಳಿಗೆ ಹಾನಿಯಾಗಿದ್ದು, ಕೆಲವು ದತ್ತಾಂಶಗಳು ನಷ್ಟವಾಗಿರುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ ಕೆಲವು ಗಂಟೆಗಳ ನಂತರ ಉಕ್ರೇನ್‌ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಬೋಯಿಂಗ್ –737 ವಿಮಾನವು ಪತನಗೊಂಡಿತ್ತು. ಇದರಲ್ಲಿದ್ದ 176 ಮಂದಿ ಮೃತಪಟ್ಟಿದ್ದಾರೆ.

ಸಂಬಂಧಿಕರ ರೋದನ: ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಮತ್ತು ಗೆಳೆಯರ ರೋದನ ಮುಗಿಲು ಮುಟ್ಟಿತ್ತು.

ತನಿಖೆಗೆ ಆಗ್ರಹ: ವಿಮಾನ ಪತನದ ಕಾರಣ ತಿಳಿಯಲು ಸಂಪೂರ್ಣ ತನಿಖೆ ನಡೆಯಬೇಕು ಎಂದು ಅಮೆರಿಕ ಮತ್ತು ಕೆನಡಾ ಆಗ್ರಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.