ADVERTISEMENT

ಇರಾನ್‌ ದೂರದರ್ಶನ ಸ್ಥಗಿತಗೊಳಿಸಿದ ಹ್ಯಾಕರ್‌ಗಳು

ಏಜೆನ್ಸೀಸ್
Published 19 ಜನವರಿ 2026, 15:34 IST
Last Updated 19 ಜನವರಿ 2026, 15:34 IST
ಇರಾನ್‌ ಜನರಿಗೆ ಬೆಂಬಲ ಸೂಚಿಸಿ ಇರಾನಿಯನ್‌ ಸಮುದಾಯದ ಸದಸ್ಯರು ಕ್ಯಾಲಿಪೊರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿ ಭಾನುವಾರ ಪ್ರತಿಭಟಿಸಿದರು –ಎಎಫ್‌ಪಿ ಚಿತ್ರ
ಇರಾನ್‌ ಜನರಿಗೆ ಬೆಂಬಲ ಸೂಚಿಸಿ ಇರಾನಿಯನ್‌ ಸಮುದಾಯದ ಸದಸ್ಯರು ಕ್ಯಾಲಿಪೊರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿ ಭಾನುವಾರ ಪ್ರತಿಭಟಿಸಿದರು –ಎಎಫ್‌ಪಿ ಚಿತ್ರ   

ದುಬೈ: ಇರಾನ್‌ ಸರ್ಕಾರಿ ಸ್ವಾಮ್ಯದ ದೂರದರ್ಶನದ ಪ್ರಸಾರವನ್ನು ಸ್ಥಗಿತಗೊಳಿಸಿದ ಹ್ಯಾಕರ್‌ಗಳು, ‘ದೇಶದಿಂದ ಗಡಿಪಾರಾಗಿರುವ ರಾಜ ರೆಜಾ ಪಹ್ಲವಿ ಅವರನ್ನು ಬೆಂಬಲಿಸುವ ಹಾಗೂ ಜನರ ಮೇಲೆ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಪ್ರಯೋಗಿಸಬಾರದು’ ಎಂದು ಹೇಳಿರುವ ವಿಡಿಯೊ ತುಣುಕುಗಳನ್ನು ಪ್ರಸಾರ ಮಾಡಿದ್ದಾರೆ.

‘ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ಬ್ರಾಡ್‌ಕಾಸ್ಟಿಂಗ್‌’ ವಾಹಿನಿಯು ಭಾನುವಾರ ರಾತ್ರಿ ವಿಡಿಯೊವೊಂದನ್ನು ಪ್ರಸಾರ ಮಾಡಿದೆ. ಇದರಲ್ಲಿ ರೆಜಾ ಪಹ್ಲವಿ ಅವರ ಎರಡು ತುಣುಕುಗಳನ್ನು ತೋರಿಸಲಾಗಿದೆ. ನಂತರ, ಇರಾನ್‌ ಪೊಲೀಸರ ಸಮವಸ್ತ್ರದಲ್ಲಿದ್ದ ಭದ್ರತಾ ಪಡೆಗಳ ಮತ್ತು ಇತರರ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಇತರರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟಿದ್ದಾರೆ ಮತ್ತು ಜನರಿಗೆ ನಿಷ್ಠರಾಗಿರುವುದಾಗಿ ಪ್ರಮಾಣ ಮಾಡಿದ್ದಾರೆ’ ಎಂದು ಹೇಳಿರುವ ವಿಡಿಯೊ ಪ್ರಸಾರ ಮಾಡಲಾಗಿದೆ. ಆದರೆ, ಇದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ.

‘ಇದು ಸೇನೆ ಮತ್ತು ಭದ್ರತಾ ಪಡೆಗಳಿಗೆ ಒಂದು ಸಂದೇಶ’ ಎಂದು ಗ್ರಾಫಿಕ್ಸ್‌ನಲ್ಲಿ ಬರೆಯಲಾಗಿದೆ. ‘ನಿಮ್ಮ ಶಸ್ತ್ರಾಸ್ತ್ರಗಳನ್ನು ಜನರ ಕಡೆಗೆ ಗುರಿಯಾಗಿಸಬೇಡಿ. ಸ್ವಾತಂತ್ರ್ಯಕ್ಕಾಗಿ ಇರಾನ್‌ನೊಂದಿಗೆ ಕೈಜೋಡಿಸಿ’ ಎಂದು ಸಲಹೆ ನೀಡಲಾಗಿದೆ.

ADVERTISEMENT

‘ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆಯಿಂದ ಕನಿಷ್ಠ 3,919 ಮಂದಿ ಮೃತಪಟ್ಟಿದ್ದಾರೆ. ಇದರ ನಡುವೆಯೇ ಈ ಹ್ಯಾಕಿಂಗ್‌ ನಡೆದಿದೆ. ಸರ್ಕಾರವು ಇಂಟರ್ನೆಟ್‌ ಸ್ಥಗಿತಗೊಳಿಸಿದ್ದರೂ ಮಾಹಿತಿ ಸೋರಿಕೆಯಾಗಿರುವುದರಿಂದ ಜನರ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು’ ಎಂದು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಎಚ್ಚರಿಕೆ ನೀಡಿದ ಬಳಿಕ, ಅಮೆರಿಕ ಮತ್ತು ಇರಾನ್‌ ನಡುವೆ ಸಂಘರ್ಷ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಚೀನಾ ಸಮುದ್ರದಲ್ಲಿದ್ದ ಅಮೆರಿಕದ ಯುದ್ಧನೌಕೆಯು ರಾತ್ರೋರಾತ್ರಿ ಸಿಂಗಪುರವನ್ನು ದಾಟಿ ಮಲಕ್ಕಾ ಜಲಸಂಧಿಯನ್ನು ಪ್ರವೇಶಿಸಿದೆ. ಈ ಮಾರ್ಗವು ಮಧ್ಯಪ್ರಾಚ್ಯದತ್ತ ಸಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.