
ಇರಾನ್ ಜನರಿಗೆ ಬೆಂಬಲ ಸೂಚಿಸಿ ಇರಾನಿಯನ್ ಸಮುದಾಯದ ಸದಸ್ಯರು ಕ್ಯಾಲಿಪೊರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟಿಸಿದರು
–ಎಎಫ್‌ಪಿ ಚಿತ್ರ
ದುಬೈ: ಇರಾನ್‌ನಲ್ಲಿ ಈಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 5,002 ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ಶುಕ್ರವಾರ ತಿಳಿಸಿದೆ.
‘ಮೃತರಲ್ಲಿ 4,716 ಪ್ರತಿಭಟನಕಾರರು, 203 ಭದ್ರತಾ ಸಿಬ್ಬಂದಿ, 43 ಮಕ್ಕಳು ಮತ್ತು 40 ನಾಗರಿಕರು ಸೇರಿದ್ದಾರೆ. 26,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದೆ.
ಪ್ರತಿಭಟನೆಯಲ್ಲಿ 3,117 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ಆಡಳಿತವು ಬುಧವಾರ ಹೇಳಿತ್ತು. ಆದರೆ, ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಆಡಳಿತವು ಕಠಿಣ ಕ್ರಮ ಕೈಗೊಂಡಿದ್ದರಿಂದ ಸಾವಿನ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿದ್ದವು.
ಇರಾನ್‌ನಲ್ಲಿ ಆರ್ಥಿಕತೆಯ ಕುಸಿತದಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿತ್ತು. ಜ.8ರಿಂದ ಹಲವು ದಿನ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು.
ಪಶ್ಚಿಮ ಏಷ್ಯಾದತ್ತ ಅಮೆರಿಕ ಯುದ್ಧ ನೌಕೆ: ಅಮೆರಿಕ ಸೇನೆಯು ತನ್ನ ಯುದ್ದ ನೌಕೆಗಳನ್ನು ಪಶ್ಚಿಮ ಏಷ್ಯಾ ಕಡೆಗೆ ಕಳುಹಿಸುತ್ತಿದೆ. ಪ್ರತಿಭಟನಕಾರರನ್ನು ಹತ್ಯೆ ಮಾಡಿದರೆ ಇರಾನ್ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು.
ಯುದ್ದ ವಿಮಾನವಾಹನ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೇತೃತ್ವದಲ್ಲಿ ಯುದ್ಧ ನೌಕೆಗಳ ತಂಡವು ದಕ್ಷಿಣ ಚೀನಾ ಸಮುದ್ರದಿಂದ ಪ್ರಯಾಣ ಬೆಳೆಸಿದೆ. ‘ಈ ಯುದ್ಧ ನೌಕೆಗಳ ತಂಡವು ಇದೀಗ ಹಿಂದೂ ಮಹಾಸಾಗರದಲ್ಲಿದೆ’ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕಾಗಿ ಬಂದರೆ, ಸಜ್ಜಾಗುವ ನಿಟ್ಟಿನಲ್ಲಿ ಯುದ್ಧ ನೌಕೆಗಳನ್ನು ಕಳುಹಿಸುತ್ತಿದ್ದೇವೆ. ಆದರೆ ಅವುಗಳನ್ನು ಬಳಸುವ ಅನಿವಾರ್ಯತೆ ಎದುರಾಗದು’ ಎಂದು ಟ್ರಂಪ್ ಗುರುವಾರ ಹೇಳಿದ್ದರು.
‘ಟ್ರಂಪ್ ಹೇಳಿಕೆ ಸುಳ್ಳು’
ತಾನು ಮಧ್ಯಪ್ರವೇಶಿಸಿದ್ದರಿಂದ ಇರಾನ್ ಸರ್ಕಾರ 800 ಪ್ರತಿಭಟನಕಾರರ ಮರಣದಂಡನೆ ನಿರ್ಧಾರವನ್ನು ಕೈಬಿಟ್ಟಿದೆ ಎಂಬ ಟ್ರಂಪ್ ಹೇಳಿಕೆಯನ್ನು ಇರಾನ್‌ನ ಪ್ರಾಸಿಕ್ಯೂಟರ್ ಅಲ್ಲಗಳೆದಿದ್ದಾರೆ.
‘ಟ್ರಂಪ್ ಹೇಳಿಕೆ ಸಂಪೂರ್ಣ ಸುಳ್ಳು’ ಎಂದು ಪ್ರಾಸಿಕ್ಯೂಟರ್ ಮೊಹಮ್ಮದ್ ಮೊವಾಹೆದಿ ಅವರು ಹೇಳಿರುವುದಾಗಿ ಇರಾನ್ ನ್ಯಾಯಾಂಗದ ಸುದ್ದಿ ಸಂಸ್ಥೆ ‘ಮೀಜಾನ್’ ವರದಿ ಮಾಡಿದೆ.
‘ಟ್ರಂಪ್ ನೀಡಿರುವ ಸಂಖ್ಯೆಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಇರಾನ್ ನ್ಯಾಯಾಂಗವು ಅಂತಹ ಯಾವುದೇ ನಿರ್ಧಾರ (ಮರಣದಂಡನೆಗೆ ತಡೆ ನೀಡುವ) ಮಾಡಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.