ADVERTISEMENT

ಪರಮಾಣು ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

ಪಿಟಿಐ
Published 22 ಜೂನ್ 2025, 13:48 IST
Last Updated 22 ಜೂನ್ 2025, 13:48 IST
   

ಟೆಹರಾನ್: ತನ್ನ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಭಾನುವಾರ ಪ್ರತಿಜ್ಞೆ ಮಾಡಿದೆ. ಅಮೆರಿಕದ ದಾಳಿಗಳು ಶಾಶ್ವತ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಿದೆ.

ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಅಮೆರಿಕದ ದಾಳಿಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನಿನ ಪರಮಾಣು ಸೌಲಭ್ಯಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಹೇಳಿದ್ದರು.

ADVERTISEMENT

ಇರಾನ್‌ನ ಶಾಂತಿಯುತ ಪರಮಾಣು ತಾಣಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕವು ವಿಶ್ವಸಂಸ್ಥೆಯ ನಿಯಮ, ಅಂತರರಾಷ್ಟ್ರೀಯ ಕಾನೂನು ಮತ್ತು ಪರಮಾಣು ಪ್ರಸರಣ ನಿಷೇಧ ಒಪ್ಪಂದದ(ಎನ್‌ಪಿಟಿ) "ಗಂಭೀರ ಉಲ್ಲಂಘನೆ ಮಾಡಿದೆ ಎಂದು ಅರಘ್ಚಿ ಹೇಳಿದ್ದಾರೆ.

ಇಂದು ಬೆಳಿಗ್ಗೆ ನಡೆದ ದಾಳಿಗಳು ಅತಿರೇಕದಿಂದ ಕೂಡಿದವು. ಅವು ಶಾಶ್ವತ ಪರಿಣಾಮಗಳನ್ನು ಬೀರುತ್ತವೆ. ಈ ಅತ್ಯಂತ ಅಪಾಯಕಾರಿ, ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಯ ಬಗ್ಗೆ ವಿಶ್ವಸಂಸ್ಥೆಯ ಪ್ರತಿಯೊಬ್ಬ ಸದಸ್ಯ ರಾಷ್ಟ್ರ ಧ್ವನಿ ಎತ್ತಬೇಕು ಎಂದು ಅವರು ಹೇಳಿದ್ದಾರೆ.

ಇರಾನ್‌ಗೆ ತನ್ನ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿದೆ.

ಮಾಸ್ಕೋಗೆ ತೆರಳಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡುವುದಾಗಿ ಅವರು ಹೇಳಿದ್ದಾರೆ.

ಇದೇವೇಳೆ, ಅಮೆರಿಕ ದಾಳಿಯನ್ನು ಖಂಡಿಸಿರುವ ರಷ್ಯಾ, ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆ ಎಂದು ಕಿಡಿಕಾರಿದೆ.

ಅಮೆರಿಕದ ದಾಳಿಯು ದೇಶದ ರಕ್ಷಣೆಗಾಗಿ ಯಾವುದೇ ಹಂತಕ್ಕೆ ಹೋಗಲು ಇರಾನ್‌ಗೆ ಕಾನೂನುಬದ್ಧ ಹಕ್ಕನ್ನು ನೀಡಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್‌ಜಿಸಿ) ಹೇಳಿದೆ.

ಎಲ್ಲ ದೇಶಗಳು ಯುದ್ಧದಿಂದ ಹಿಂದೆ ಸರದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ 27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟವು ಹೆಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.