ADVERTISEMENT

ಬಾಗ್ದಾದ್‌: ಗ್ರಾಮದ ಮೇಲೆ ಭಯೋತ್ಪಾದಕರ ದಾಳಿ, 11 ನಾಗರಿಕರ ಸಾವು

ಏಜೆನ್ಸೀಸ್
Published 27 ಅಕ್ಟೋಬರ್ 2021, 5:30 IST
Last Updated 27 ಅಕ್ಟೋಬರ್ 2021, 5:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗ್ದಾದ್‌: ಇಸ್ಲಾಮಿಕ್‌ ಸ್ಟೇಟ್(ಐಸಿಸ್‌) ಭಯೋತ್ಪಾದಕ ಗುಂಪಿಗೆ ಸೇರಿದ ಉಗ್ರರು ಮಂಗಳವಾರ ಬಾಗ್ದಾದ್‌ನ ಈಶಾನ್ಯ ಭಾಗದಲ್ಲಿರುವ ಹಳ್ಳಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 11 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್‌ನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ದಿಯಾಲಾ ಪ್ರಾಂತ್ಯದ ಬಕೌಬಾದ ಈಶಾನ್ಯದಲ್ಲಿರುವ ಶಿಯಾ ಸಮುದಾಯದವರು ಬಹುಸಂಖ್ಯಾತರಿರುವ ಅಲ್-ರಶಾದ್‌ನ ಗ್ರಾಮದ ಮೇಲೆ ಮೆಶಿನ್‌ ಗನ್‌ಗಳಿಂದ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸ್‌ ಉಗ್ರರು ಈ ಹಿಂದೆ ಇಬ್ಬರು ಗ್ರಾಮಸ್ಥರನ್ನು ಅಪಹರಿಸಿದ್ದರು. ಆದರೆ ಭಾರಿ ಹಣ ಕೇಳಿದ ಅವರ ಬೇಡಿಕೆಗಳು ಈಡೇರದ ಕಾರಣಕ್ಕೆ ಹಳ್ಳಿಯ ಮೇಲೆಯೇ ದಾಳಿ ನಡೆಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ADVERTISEMENT

2017ರಲ್ಲಿ ಇರಾಕ್‌ನಲ್ಲಿ ಐಸಿಸ್‌ ಬಹುತೇಕ ಸೋತ ಬಳಿಕ ನಾಗರಿಕರ ಮೇಲಿನ ದಾಳಿಗಳು ಅಪರೂಪವಾಗಿದ್ದವು. ಸುನ್ನಿ ಸಮುದಾಯಕ್ಕೆ ಸೇರಿದ ಈ ಉಗ್ರರು ಭದ್ರತಾ ಪಡೆಗಳು, ವಿದ್ಯುತ್ ಸ್ಥಾವರಗಳು, ಇತರ ಮೂಲಸೌಲಭ್ಯಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿದ್ದರು.

ಜುಲೈನಲ್ಲಿ ಬಾಗ್ದಾದ್‌ನಲ್ಲಿ ರಸ್ತೆ ಬದಿಯಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಿಸಿ ಕನಿಷ್ಠ 30 ಮಂದಿ ಮೃತಪಟ್ಟಿದ್ದರು. ಜನವರಿಯಲ್ಲಿ ಇಲ್ಲಿನ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಆತ್ಮಹತ್ಯಾ ಬಾಂಬ್‌ ದಾಳಿಗಳು ನಡೆದು 32 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.