ADVERTISEMENT

ಅಫ್ಗನ್‌ನಿಂದ ಬೇರೆ ದೇಶಕ್ಕೆ ತೆರಳಿದವರ ಜತೆ ಉಗ್ರರೂ ಇರುವ ಬಗ್ಗೆ ಅಮೆರಿಕ ಶಂಕೆ

ಡೆಕ್ಕನ್ ಹೆರಾಲ್ಡ್
Published 27 ಆಗಸ್ಟ್ 2021, 15:37 IST
Last Updated 27 ಆಗಸ್ಟ್ 2021, 15:37 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ಕಾಬೂಲ್: ಅಫ್ಗಾನಿಸ್ತಾನದಿಂದ ಸಾವಿರಾರು ವಿದೇಶಿ ನಾಗರಿಕರು ಮತ್ತು ನಿರಾಶ್ರಿತರ ತೆರವು ಕಾರ್ಯಾಚರಣೆ ವೇಳೆ ಪರಿಸ್ಥಿತಿಯ ಲಾಭ ಪಡೆದು ಉಗ್ರರೂ ಯುರೋಪ್‌ ದೇಶಗಳು ಮತ್ತು ಅಮೆರಿಕಕ್ಕೆ ನುಸುಳಿರುವ ಸಾಧ್ಯತೆ ಇದೆ ಎಂದು ಪೆಂಟಗನ್‌ ಮೂಲಗಳು ಆತಂಕ ವ್ಯಕ್ತಪಡಿಸಿವೆ.

ಭಯೋತ್ಪಾದಕರು ಪರಿಸ್ಥಿತಿಯನ್ನು ಬಳಸಿಕೊಳ್ಳಲು, ಮುಗ್ದ ಅಫ್ಗನ್ ಜನರನ್ನು ಮತ್ತು ಅಮೆರಿಕದ ಯೋಧರನ್ನು ಗುರಿಯಾಗಿಸಲು ಯತ್ನಿಸಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಅಭಿಪ್ರಾಯಪಟ್ಟಿರುವುದಾಗಿಯೂ ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಐಎಎನ್‌ಎಸ್’ ವರದಿ ಮಾಡಿದೆ.

ಆದರೆ ಈ ವಿಚಾರವಾಗಿ ಅಮೆರಿಕ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದೂ ವರದಿ ಉಲ್ಲೇಖಿಸಿದೆ.

ಅಫ್ಗಾನಿಸ್ತಾನದಿಂದ ಸ್ಥಳಾಂತರಗೊಂಡವರ ಪೈಕಿ ಕನಿಷ್ಠ ನೂರು ಮಂದಿಯ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಮತ್ತು ಶಂಕಿತ ಭಯೋತ್ಪಾದಕರಿರಬಹುದು ಎಂಬ ಅನುಮಾನದ ಮೇರೆಗೆ ಕಣ್ಗಾವಲಿರಿಸಲಾಗಿದೆ ಎಂದು ಪೆಂಟಗನ್ ಹೇಳಿಕೆ ಆಧರಿಸಿ ಪಾಶ್ಚಾತ್ಯ ದೇಶಗಳ ಮಾಧ್ಯಮಗಳು ವರದಿ ಮಾಡಿವೆ.

ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನ ವಿವಿಧ ಸೇನಾ ನೆಲೆಗಳಲ್ಲಿ ಶಂಕಿತರನ್ನು ಸಾವಿರಾರು ನಿರಾಶ್ರಿತರಿಂದ ಬೇರ್ಪಡಿಸಲಾಗಿದೆ. ಕಾಬೂಲ್‌ನಿಂದ ಹೊರಟ ಎಲ್ಲ ವಿಮಾನಗಳನ್ನು ಕತಾರ್‌ನ ಅಲ್ ಉದೈದ್ ವಾಯುನೆಲೆಯಲ್ಲಿ ಮತ್ತು ನ್ಯಾಟೊ ರಾಷ್ಟ್ರಗಳ ವಾಯುನೆಲೆಗಳಲ್ಲಿ ಮೊದಲು ನಿಲ್ಲಿಸಲು ಅಮೆರಿಕ ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಬ್ರಿಟನ್‌ಗೆ ನೇರ ಬೆದರಿಕೆ ಎಂದು ಪರಿಗಣಿಸಲಾದವರೂ ಕಾಬೂಲ್‌ನಿಂದ ಸ್ಥಳಾಂತರಗೊಳ್ಳುವವರ ಜತೆ ಸೇರಿದ್ದಾರೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ಬ್ರಿಟನ್ ಯೋಧರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿದೆ ಎಂಬ ವರದಿಗಳ ಬೆನ್ನಲ್ಲೇ, ಬ್ರಿಟನ್‌ಗೆ ನೇರ ಬೆದರಿಕೆ ಎಂದು ಪರಿಗಣಿಸಲಾಗಿರುವ ಆರು ಮಂದಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇತರರ ಜತೆ ಸೇರಿಕೊಂಡಿರುವುದು ಭದ್ರತಾ ತಪಾಸಣೆ ವೇಳೆ ಕಂಡುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

‘ಅಫ್ಗಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಸಾವಿರಾರು ಭಯೋತ್ಪಾದಕರು ಅಫ್ಗಾನಿಸ್ತಾನದಿಂದ ಹೊರಕ್ಕೆ ಹೋಗಿರಬಹುದು’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.