ADVERTISEMENT

ಇಸ್ರೇಲ್‌ ತೀವ್ರ ದಾಳಿ: ಇರಾನ್‌ನ ಮೂವರು ಕಮಾಂಡರ್‌ಗಳ ಹತ್ಯೆ

ಏಜೆನ್ಸೀಸ್
Published 21 ಜೂನ್ 2025, 14:00 IST
Last Updated 21 ಜೂನ್ 2025, 14:00 IST
   

ಟೆಲ್‌ ಅವೀವ್‌/ ಜೆರುಸಲೇಮ್: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸೇನಾ ಸಂಘರ್ಷ ಎರಡನೇ ವಾರವೂ ಮುಂದುವರಿದಿದ್ದು, ಉಭಯ ದೇಶಗಳಿಂದ ಶನಿವಾರವೂ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಗಳು ನಡೆದಿವೆ.

ವ್ಯಾಪಕ ಬಾಂಬ್‌ ದಾಳಿಯಲ್ಲಿ ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಸೇರಿದಂತೆ ಮೂವರು ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಮತ್ತು ಇರಾನಿನ ಅಣು ಸಂಶೋಧನಾ ಕೇಂದ್ರದ ಮೇಲೂ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಇರಾನ್‌ ಸೇನೆಯ ಉನ್ನತ ಅಧಿಕಾರಿ ಸಯೀದ್‌ ಇಜಾದಿ, ಕುದ್ಸ್‌ ಪಡೆಯ ಕಮಾಂಡರ್ ಬೆಹನಾಮ್‌ ಸೆಹ್ರಿಯಾರಿ ಹಾಗೂ ಅಮಿನ್‌ಪೌರ್ ಜುಡಾಕಿ ಹತರಾದ ಕಮಾಂಡರ್‌ಗಳು ಎಂದು ಅದು ತಿಳಿಸಿದೆ.

ADVERTISEMENT

ಹಮಾಸ್‌ಗೆ ನೆರವು ನೀಡಿದ್ದ ಇಜಾದಿ:

‘2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ನಡೆಸಿದ ದಾಳಿಗೆ ಇಜಾದಿ  ಆರ್ಥಿಕ ಮತ್ತು ಶಸ್ತ್ರಾಸ್ತ್ರದ ನೆರವು ನೀಡಿದ್ದರು. ಅವರನ್ನು ಕೋಮ್‌ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಕೊಲ್ಲಲಾಗಿದೆ. ನಮ್ಮ ಫೈಟರ್‌ ಜೆಟ್‌ಗಳು ಯಶಸ್ವಿಯಾಗಿ ಈ ಕಾರ್ಯ ಮಾಡಿವೆ’ ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.   

ಕುದ್ಸ್‌ ಪಡೆಯ ಕಮಾಂಡರ್ ಬೆಹನಾಮ್‌ ಸೆಹ್ರಿಯಾರಿ ಪಶ್ಚಿಮ ಇರಾನ್‌ನಲ್ಲಿ ಕಾರಿನಲ್ಲಿ ಸಾಗುತ್ತಿದ್ದಾಗ ಹತ್ಯೆ ಮಾಡಲಾಗಿದೆ. ಇರಾನ್‌ ಡ್ರೋನ್ ಪಡೆಯ ಕಮಾಂಡರ್‌ ಜುಡಾಕಿ ಅನ್ನೂ ರಾತ್ರಿ ದಾಳಿ ಮೂಲಕ ಕೊಲ್ಲಲಾಗಿದೆ ಎಂದು ಸೇನೆ ವಿವರಿಸಿದೆ.  

ಇರಾನ್‌ನ ಇಸ್‌ಫಹಾನ್‌ನಲ್ಲಿರುವ ಅಣು ಸ್ಥಾವರದ ಮೇಲೆ ಇಸ್ರೇಲ್‌ ಎರಡನೇ ಬಾರಿ ವೈಮಾನಿಕ ದಾಳಿ ನಡೆಸಿದೆ. ಅಲ್ಲದೇ, ಇರಾನ್‌ನ ಕ್ಷಿಪಣಿಗಳ ಸಂಗ್ರಹಾಗಾರದ ಮೇಲೂ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ. 

ಇರಾನ್‌ ದಾಳಿ: ವಸತಿ ಪ್ರದೇಶಗಳಿಗೆ ಹಾನಿ

ಇಸ್ರೇಲ್‌ನ ಮಿಲಿಟರಿ ತಾಣಗಳು ಹಾಗೂ ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಇರಾನ್‌ ಡ್ರೋನ್‌ಗಳ ದಾಳಿಯಿಂದಾಗಿ ದೇಶದ ಉತ್ತರ ಭಾಗದಲ್ಲಿನ ಹಲವಾರು ವಸತಿ ಪ್ರದೇಶಗಳಿಗೆ ಹಾನಿಯಾಗಿರುವುದನ್ನು ಇಸ್ರೇಲ್‌ ಖಚಿತಪಡಿಸಿದೆ

ಈ ವರೆಗೆ, ಇಸ್ರೇಲ್‌ ಬೇಹುಗಾರಿಕೆ ಇಲಾಖೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ 22 ಜನರನ್ನು ಬಂಧಿಸಿದ್ದಾಗಿ ಇರಾನ್‌ ಪೊಲೀಸರು ಹೇಳಿದ್ದಾರೆ

ಪ್ರಗತಿ ಸಾಧಿಸದ ಮಾತುಕತೆ ಇರಾನ್‌

ಇಸ್ರೇಲ್‌ ನಡುವಿನ ಸೇನಾ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ಜಿನೀವಾದಲ್ಲಿ ಶುಕ್ರವಾರ ನಡೆದ ರಾಜತಾಂತ್ರಿಕ ಮಾತುಕತೆಗಳು ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆ ನಡೆಸುವ ಭರವಸೆಯನ್ನು ಯುರೋಪಿನ ನಾಯಕರು ವ್ಯಕ್ತಪಡಿಸಿದ್ದಾರೆ.

‘ದಾಳಿ ತಕ್ಷಣವೇ ನಿಲ್ಲಬೇಕು ಮತ್ತು ದಾಳಿ ಮಾಡಿದವರನ್ನು ಅದರ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಸಭೆಯಲ್ಲಿ ಆಗ್ರಹಿಸಿದ್ದಾಗಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ಸುದ್ದಿಗಾರರಿಗೆ ತಿಳಿಸಿದರು.

‘ಇಸ್ರೇಲ್‌ ದಾಳಿಯನ್ನು ಮುಂದುವರಿಸಿರುವಾಗ ಅಮೆರಿಕದ ಜತೆ ಮಾತುಕತೆ ನಡೆಸಲು ಆಸಕ್ತಿಯಿಲ್ಲ’ ಎಂದ ಅವರು ಮುಂದಿನ ಸುತ್ತಿನ ಮಾತುಕತೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದೂ ಹೇಳಿದರು.

ಇರಾನ್‌ ಎಚ್ಚರಿಕೆ

ಇಸ್ರೇಲ್‌ ಜತೆಗಿನ ಯುದ್ಧದಲ್ಲಿ ಅಮೆರಿಕ ಸಕ್ರಿಯವಾಗಿ ತೊಡಗಿಸಿಕೊಂಡರೆ ಅದು ಎಲ್ಲರಿಗೂ ತುಂಬಾ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತನ್ನ ದೇಶದ ಸೇನೆ ಈ ಸಂಘರ್ಷದಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ಈಗಾಗಲೇ ಎಚ್ಚರಿಸಿದ್ದಾರೆ. ಇದು ತುಂಬಾ ದುರದೃಷ್ಟಕರ ಸಂಗತಿ ಎಂದು ಅರಾಗ್ಚಿ ಬೇಸರ ವ್ಯಕ್ತಪಡಿಸಿದ್ದಾರೆ.   

ನಿರಂತರ ದಾಳಿ ಮೂಲಕ ಅಣ್ವಸ್ತ್ರಗಳನ್ನು ಹೊಂದಬೇಕೆಂಬ ಇರಾನ್‌ನ ಯೋಜನೆಗಳನ್ನು ಕನಿಷ್ಠ 2–3 ಮೂರು ವರ್ಷ ವಿಳಂಬವಾಗುವಂತೆ ಮಾಡಿದ್ದೇವೆ.
ಗಿಡಿಯಾನ್‌ ಝಾರ್, ಇಸ್ರೇಲ್‌ ವಿದೇಶಾಂಗ ಸಚಿವ
ಇರಾನ್‌–ಇಸ್ರೇಲ್‌ ನಡುವಿನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ನಿರಾಶ್ರಿತರ ಸಮಸ್ಯೆಗೆ ದಾರಿ ಮಾಡಿಕೊಡುವಂತಾಗಬಾರದು.
ವಿಶ್ವಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.