ಸಾಂದರ್ಭಿಕ ಚಿತ್ರ
–ಎ.ಐ ಚಿತ್ರ
ಜೆರುಸಲೇಂ: ಇರಾನ್ ಮೇಲಿನ ದಾಳಿಯ ಎರಡನೇ ಹಂತದಲ್ಲಿ ಇಸ್ಫಹಾನ್ ಅಣು ಕೇಂದ್ರದಲ್ಲಿರುವ ಎರಡು ಸೆಂಟ್ರಿಫ್ಯೂಜ್ (ತಿರುಗುವ ಕಂಟೈನರ್ ಇರುವ ಯಂತ್ರ ಅಥವಾ ಗಿರಗಿಣಿ) ಉತ್ಪಾದನಾ ಕೇಂದ್ರಗಳ ಮೇಲೆ ರಾತ್ರಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಸೇನಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ನಮ್ಮ ಕಾರ್ಯಾಚರಣೆಯ ಮೊದಲ 24 ಗಂಟೆಯಲ್ಲಿ ನಾವು ಇಸ್ಫಹಾನ್ ಅನ್ನು ಗುರಿಯಾಗಿಸಿಕೊಂಡಿದ್ದೆವು. ಕಳೆದ ರಾತ್ರಿ ನಾವು ಎರಡನೇ ಹಂತದ ದಾಳಿ ನಡೆಸಿದ್ದು, ಅಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ’ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಸೇನಾ ಸಿಬ್ಬಂದಿಯೊಬ್ಬರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾವು ಸೆಂಟ್ರಿಫ್ಯೂಜ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದೆವು. ಈ ದಾಳಿ ಅದರ ಮುಂದುವರೆದ ಭಾಗ ಎಂದು ಅವರು ತಿಳಿಸಿದ್ದಾರೆ.
ಸೆಂಟ್ರಿಫ್ಯೂಜ್ ಘಟಕಗಳ ಮೇಲೆ ಇಸ್ರೇಲಿ ವಾಯುಪಡೆಗಳಿಂದ ಸತತ ದಾಳಿಯು ಉತ್ಪಾದನಾ ಸಾಮರ್ಥ್ಯಕ್ಕೆ ಗಂಭೀರ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ನಾಗರಿಕ ಹಾಗೂ ಮಿಲಿಟರಿ ಬಳಕೆಗೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸಲು ಸೆಂಟ್ರಿಫ್ಯೂಜ್‌ಗಳನ್ನು ಬಳಸಲಾಗುತ್ತದೆ.
ಕೇಂದ್ರ ಇರಾನ್‌ನಲ್ಲಿರುವ ಇಸ್ಫಹಾನ್ ಅಣು ಕೇಂದ್ರದಲ್ಲಿ ಯುರೇನಿಯಂ ಪರಿವರ್ತನಾ ವ್ಯವಸ್ಥೆ ಇದೆ ಎಂದು ನಂಬಲಾಗಿದೆ.
ಅಲ್ಲದೇ ಅಲ್ಲಿ ಅಣು ಇಂಧನಾ ಉತ್ಪಾದನಾ ಘಟಕವೂ ಇದೆ. ಇದನ್ನು 2009ರಲ್ಲಿ ಉದ್ಘಾಟಿಸಲಾಗಿತ್ತು.
2022ರಲ್ಲಿ ಅಲ್ಲಿ ಹೊಸ ಸಂಶೋಧನಾ ರಿಯಾಕ್ಟರ್ ನಿರ್ಮಿಸುವುದಾಗಿಯೂ ಘೋಷಿಸಿತ್ತು.
ಜೂನ್ 13ರಂದು ನಡೆಸಿದ ದಾಳಿಯಲ್ಲಿ ಇಸ್ಫಹಾನ್‌ನಲ್ಲಿರುವ ಲೋಹ ಯುರೇನಿಯಂ ಸೇರಿ ಹಲವು ಸೌಲಭ್ಯಗಳನ್ನು ಗುರಿ ಮಾಡಿಕೊಳ್ಳಲಾಗಿತ್ತು ಎಂದು ಇಸ್ರೇಲ್ ತಿಳಿಸಿತ್ತು.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.