ADVERTISEMENT

Israel Iran War | ಇಸ್ರೇಲ್–ಇರಾನ್‌ ಸಂಘರ್ಷ ತೀವ್ರ

ರಾಜಧಾನಿ ಟೆಹರಾನ್‌ ಮೇಲೆ ದಾಳಿ * ಇರಾನ್‌ನಿಂದಲೂ ಪ್ರತಿದಾಳಿ

ಏಜೆನ್ಸೀಸ್
Published 19 ಜೂನ್ 2025, 0:30 IST
Last Updated 19 ಜೂನ್ 2025, 0:30 IST
<div class="paragraphs"><p>ಟೆಹರಾನ್ ಮೇಲೆ ನಡೆದ ದಾಳಿ</p></div>

ಟೆಹರಾನ್ ಮೇಲೆ ನಡೆದ ದಾಳಿ

   

(ರಾಯಿಟರ್ಸ್ ಚಿತ್ರ)

ದುಬೈ: ಇರಾನ್‌ ರಾಜಧಾನಿ ಟೆಹರಾನ್‌ ಮೇಲೆ ಇಸ್ರೇಲ್ ಬುಧವಾರ ಮುಂಜಾನೆಯೂ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ ಕೂಡಾ ಇಸ್ರೇಲ್ ಮೇಲೆ ಸಣ್ಣ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದೆ.

ADVERTISEMENT

ಇರಾನ್‌ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಆರನೇ ದಿನವೂ ಮುಂದುವರಿದಿದ್ದು, ಬುಧವಾರದ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಪ್ರಮುಖ ಬೆಳವಣಿಗೆಗಳು

* ಇರಾನ್‌ ಯುರೇನಿಯಂ ಶುದ್ಧೀಕರಣ ಘಟಕ ಮತ್ತು ಕ್ಷಿಪಣಿಯ ಬಿಡಿಭಾಗಗಳ ತಯಾರಿಕಾ ಕೇಂದ್ರವನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

* ದೇಶದ ಪ್ರಮುಖ ರೇಡಾರ್‌ ವ್ಯವಸ್ಥೆಗೆ ಹಾನಿಯಾಗಿದೆ ಎಂದು ಇರಾನ್‌ ಹೇಳಿದೆ

* ಟೆಹರಾನ್‌ನ ಸುತ್ತಮುತ್ತಲಿರುವ ಇರಾನ್‌ನ ಪರಮಾಣು ಯೋಜನೆಗೆ ಸಂಬಂಧಿಸಿದ ಸ್ಥಳಗಳನ್ನು ಇಸ್ರೇಲ್‌ ನಾಶಪಡಿಸಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ದೃಢಪಡಿಸಿದೆ.

* ವಿಮಾನಗಳಿಗೆ ತೈಲ ಪೂರೈಸುವ ಟ್ಯಾಂಕರ್‌ಗಳು ಮತ್ತು ಸಿ17 ಯುದ್ಧ ವಿಮಾನಗಳನ್ನು ಅಮೆರಿಕವು ರಾತ್ರೋರಾತ್ರಿ ಪ್ರೆಸ್ಟ್‌ವಿಕ್, ಸ್ಕಾಟ್ಲೆಂಡ್‌ ಮತ್ತು ಇಟಲಿಯಲ್ಲಿನ ಯುರೋಪ್ ವಾಯುನೆಲೆಗಳಿಗೆ ಕಳುಹಿಸಿದೆ ಎಂದು ‘ಆರೋರಾ ಇಂಟೆಲ್‌’ ತಿಳಿಸಿದೆ. 12 ಎಫ್‌–16 ಯುದ್ಧವಿಮಾನಗಳನ್ನು ಅಮೆರಿಕವು ಇಟಲಿಯ ವಾಯುನೆಲೆಯಿಂದ ಸೌದಿ ಅರೇಬಿಯಾದ ವಾಯುನೆಲೆಗೆ ಮಂಗಳವಾರ ಸ್ಥಳಾಂತರಿಸಿದೆ ಎಂದು ವರದಿ ಮಾಡಿದೆ

* ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶೀಘ್ರದಲ್ಲಿ ಶಮನಗೊಳಿಸುವಂತೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಕರೆ ನೀಡಿದ್ದಾರೆ.

ಇರಾನ್‌ ಗಡಿಯಲ್ಲಿ ಸಿಲುಕಿರುವ ಭಾರತೀಯ

ಕೋಲ್ಕತ್ತ: ಸಂಘರ್ಷ ಪೀಡಿತ ಟೆಹರಾನ್‌ನಲ್ಲಿ ಸಿಲುಕಿದ್ದ ಭಾರತೀಯರೊಬ್ಬರು ರಸ್ತೆ ಮೂಲಕ 500 ಕಿ.ಮೀ ಪ್ರಯಾಣ ಮಾಡಿ ಮಂಗಳವಾರ ಸಂಜೆ ಅಜರ್‌ಬೈಜಾನ್‌ ಗಡಿಯನ್ನು ತಲುಪಿದ್ದಾರೆ. ಆದರೆ ಅವರ ಸಂಕಷ್ಟ ದೂರವಾಗಿಲ್ಲ. ಭಾರತೀಯ ಪ್ರವಾಸಿಗ ಕೋಲ್ಕತ್ತದ ಕಾಲೇಜು ಪ್ರಾಧ್ಯಾಪಕ ಫಲ್ಗುಣಿ ಡೇ ಅವರು ಅಜರ್‌ಬೈಜಾನ್‌ ದಾಟಿ ಬಾಕುಗೆ ತಲುಪಬೇಕಾದರೆ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಬೇಕಾಗಿರುವುದರಿಂದ ಅವರಿಗೆ ಮತ್ತೆ ಸವಾಲು ಎದುರಾಗಿದೆ. ‘ಟೆಹರಾನ್‌ನಲ್ಲಿನ ಬಾಂಬ್‌ ದಾಳಿಯಿಂದ ತಪ್ಪಿಸಿಕೊಂಡಿದ್ದೇನೆ. ಆದರೆ ಈಗ ಇರಾನ್‌ನ ಅಸ್ತಾರ ಗಡಿಯಲ್ಲಿ ಸಿಲುಕಿದ್ದೇನೆ. ಸರ್ಕಾರ ನೀಡುವ ವಿಶೇಷ ವಲಸೆ ಸಂಖ್ಯೆಯಿಲ್ಲದೇ ಅಜರ್‌ಬೈಜಾನ್‌ನ ಅಧಿಕಾರಿಗಳು ತಮ್ಮ ದೇಶದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ನನ್ನ ಇ–ವೀಸಾವು ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಡೇ ಅವರು ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ. ‘ನಾನು ಎಷ್ಟೇ ಪ್ರಯತ್ನಿಸಿದರೂ ಕೋಡ್‌ ಸಿಗಲು ಕನಿಷ್ಠ 15 ದಿನ ಬೇಕಾಗುತ್ತದೆ. ನಾನು ಇರಾನ್‌ನಲ್ಲಿ ಎಷ್ಟು ದಿನ ಬದುಕಿರುತ್ತೇನೆ ಎಂಬುವುದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ‘ರಾಯಭಾರ ಕಚೇರಿಯ ಅಧಿಕಾರಿಗಳು ನನ್ನ ದಾಖಲೆಗಳನ್ನು ಅಜರ್‌ಬೈಜಾನ್‌ ಅಧಿಕಾರಿಗಳಿಗೆ ನೀಡಿದ್ದಾರೆ. ಇರಾನ್‌ ತೊರೆಯಲು ಅವಕಾಶ ಸಿಗಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.