ಇರಾನ್ ಮೇಲೆ ಇಸ್ರೇಲ್ ಭಾರಿ ದಾಳಿ: ಹೈ ಅಲರ್ಟ್
ಟೆಹರಾನ್: ಇರಾನ್‌ನ ಪರಮಾಣು ಘಟಕಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಶುಕ್ರವಾರ ಬೆಳಗಿನ ಜಾವ ಭಾರಿ ವೈಮಾನಿಕ ದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
1980ರ ಇರಾಕ್ ಜತೆಗಿನ ಯುದ್ಧದ ನಂತರ ಇರಾನ್ ಎದುರಿಸಿದ ಅತಿದೊಡ್ಡ ದಾಳಿ ಇದಾಗಿದೆ.
‘ಆಪರೇಷನ್ ರೈಸಿಂಗ್ ಲಯನ್’ ಹೆಸರಿನಡಿ ನಡೆದ ಕಾರ್ಯಾಚರಣೆಯಲ್ಲಿ ಇರಾನ್ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ಮುಖ್ಯಸ್ಥ ಹುಸೇನ್ ಸಲಾಮಿ ಮೃತಪಟ್ಟಿದ್ದಾರೆ.
ಐಆರ್‌ಜಿಸಿಯ ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮುಖ್ಯಸ್ಥ ಅಮೀರ್ ಅಲಿ ಹಾಜಿಝದಾ ಅವರೂ ಬಲಿಯಾಗಿದ್ದಾರೆ. ಈ ಮೂವರ ಸಾವನ್ನು ಇರಾನ್ ದೃಢಪಡಿಸಿದೆ. ಇರಾನ್ ಪರಮಾಣು ಯೋಜನೆಯಲ್ಲಿ ಭಾಗಿಯಾಗಿರುವ ಹಲವು ವಿಜ್ಞಾನಿಗಳೂ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಈ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಅನ್ನು ‘ಕಠಿಣ ಶಿಕ್ಷೆ’ಗೆ ಗುರಿಪಡಿಸಲಾಗುವುದು ಎಂದು ಇರಾನ್‌ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಸೇನೆ ಇಸ್ರೇಲ್‌ನತ್ತ ಹಲವು ಡ್ರೋನ್‌ಗಳನ್ನು ಹಾರಿಸಿದೆ.
‘ಇರಾನ್ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದ್ದು, ಅವುಗಳನ್ನು ವಾಯು ರಕ್ಷಣಾ ವ್ಯವಸ್ಥೆಯು ಇಸ್ರೇಲ್ ಗಡಿಯ ಹೊರಭಾಗದಲ್ಲೇ ಹೊಡೆದುರುಳಿಸಿವೆ’ ಎಂದು ಇಸ್ರೇಲ್ ಸೇನೆ ಹೇಳಿದೆ.
ದಾಳಿಯ ಬಗ್ಗೆ ತಮಗೆ ಮುಂಚಿತವಾಗಿಯೇ ಮಾಹಿತಿ ಇತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಇರಾನ್ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ’ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ನಟಾನ್ಜ್ ಪರಮಾಣು ಘಟಕ ಗುರಿ: ಇರಾನ್ ತನ್ನ ಪರಮಾಣು ಯೋಜನೆಗಳಿಗೆ ಬೇಕಾದ ಯುರೇನಿಯಂ ಉತ್ಪಾದಿಸುವ ಅತಿದೊಡ್ಡ ಕೇಂದ್ರ, ನಟಾನ್ಜ್‌ನಲ್ಲಿರುವ ಪರಮಾಣು ಘಟಕದ ಮೇಲೂ ದಾಳಿ ನಡೆದಿದೆ. ಭೂಮಿಯಡಿಯಲ್ಲಿರುವ ಈ ಘಟಕಕ್ಕೆ ಭಾರಿ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಟಾನ್ಜ್ ಮೇಲೆ ದಾಳಿ ನಡೆದಿರುವುದನ್ನು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ದೃಢಪಡಿಸಿದೆ. ‘ವಿಕಿರಣ ಸೋರಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಂಸ್ಥೆಯು ಇರಾನ್‌ನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಇರಾನ್‌ನಲ್ಲಿರುವ ನಮ್ಮ ಅಧಿಕಾರಿಗಳ ಜತೆಯೂ ಮಾತುಕತೆ ನಡೆಸಿದ್ದೇವೆ’ ಎಂದು ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ.
ಟೆಹರಾನ್‌ನ ವಸತಿ ಸಮುಚ್ಚಯಗಳಿಗೂ ದಾಳಿಯಿಂದ ಹಾನಿಯಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ನಾಗರಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ. ಆರು ಪರಮಾಣು ವಿಜ್ಞಾನಿಗಳು ಮೃತಪಟ್ಟಿರುವುದಾಗಿ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.
ಕಾರ್ಯಾಚರಣೆಗೆ 200 ಯುದ್ಧ ವಿಮಾನಗಳನ್ನು ಬಳಸಲಾಗಿದ್ದು, 100 ತಾಣಗಳನ್ನು ನಿಖರವಾಗಿ ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಸೇನಾ ನೆಲೆಗಳ ಮೇಲಿನ ದಾಳಿಯಲ್ಲಿ ಹಲವು ರೇಡಾರ್ ವ್ಯವಸ್ಥೆ ಮತ್ತು ನೆಲದಿಂದ ಆಗಸಕ್ಕೆ ಕ್ಷಿಪಣಿ ಹಾರಿಸುವ ಲಾಂಚರ್‌ಗಳನ್ನು ನಾಶಪಡಿಸಲಾಗಿದೆ ಎಂದಿದೆ.
ದಾಳಿಯ ಬೆನ್ನಲ್ಲೇ ಟೆಹರಾನ್‌ನ ಇಮಾಮ್ ಖೊಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಇರಾಕ್ ಮತ್ತು ಜೋರ್ಡನ್ ಕೂಡ ತಮ್ಮ ವಾಯುಪ್ರದೇಶವನ್ನು ಮುಚ್ಚಿ ಎಲ್ಲ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದವು.
ಎಮಿರೇಟ್ಸ್, ಕತಾರ್ ಏರ್‌ವೇಸ್, ಏರ್ ಫ್ರಾನ್ಸ್ ಮತ್ತು ಲುಫ್ತಾನ್ಸಾ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳು ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತಮ್ಮ ವಿಮಾನಗಳನ್ನು ರದ್ದುಗೊಳಿಸಿದವು.
ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದು, ತುರ್ತು ಪರಿಸ್ಥಿತಿ ಘೋಷಿಸಿದೆ. ‘ಇರಾನ್‌ನ ನಿರೀಕ್ಷಿತ ಪ್ರತೀಕಾರದ ದಾಳಿ ಎದುರಿಸಲು ನಾವು ಸಜ್ಜಾಗಿದ್ದೇವೆ’ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.