
ಸಾವಿರಾರು ಪ್ಯಾಲೆಸ್ಟೀನಿಯನ್ನರು ಶನಿವಾರ ಗಾಜಾ ನಗರಕ್ಕೆ ಮರಳಿದರು
ಎಎಫ್‌ಪಿ ಚಿತ್ರ
ಗಾಜಾ/ರಮಲ್ಲಾ (ವೆಸ್ಟ್ ಬ್ಯಾಂಕ್): ಇಸ್ರೇಲ್ ಜೈಲುಗಳಲ್ಲಿರುವ ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಮತ್ತು ಹಮಾಸ್ ಸಂಘಟನೆಯು ತನ್ನ ಬಳಿ ಇಟ್ಟುಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಸೋಮವಾರ ಆರಂಭಗೊಳ್ಳಲಿದೆ.
‘ಕದನವಿರಾಮ ಜಾರಿಯಾಗಿದೆ. ಜೀವಂತವಾಗಿರುವ 20 ಒತ್ತೆಯಾಳುಗಳು ಸೋಮವಾರ ಬಿಡುಗಡೆಯಾಗಲಿದ್ದಾರೆ. ಮೃತಪಟ್ಟಿರಬಹುದು ಎಂದು ಅಂದುಕೊಂಡಿರುವ ಉಳಿದ 28 ಒತ್ತೆಯಾಳುಗಳ ಮೃತದೇಹಗಳ ಹಸ್ತಾಂತರ ಪ್ರಕ್ರಿಯೆಯೂ ನಡೆಯಲಿದೆ’ ಎಂದು ಇಸ್ರೇಲ್ ಸೇನೆ ಹೇಳಿದೆ. ‘ಶುಕ್ರವಾರದಿಂದ ಇಸ್ರೇಲ್ ಸೇನೆಯು ದಾಳಿ ನಿಲ್ಲಿಸಿದೆ’ ಎಂದು ಪ್ಯಾಲೆಸ್ಟೀನಿಯನ್ನರು ಹೇಳಿದ್ದಾರೆ.
‘ಗಾಜಾ ತಲುಪಲು 1.70 ಲಕ್ಷ ಮೆಟ್ರಿಕ್ ಟನ್‌ನಷ್ಟು ನೆರವಿನ ಸಾಮಾಗ್ರಿಗಳು ಈಗಾಗಲೇ ಜೋರ್ಡಾನ್ ಹಾಗೂ ಈಜಿಪ್ಟ್ ಬಂದರುಗಳಲ್ಲಿವೆ. ಇಸ್ರೇಲ್ ಸೇನೆ ಹಸಿರು ನಿಶಾನೆ ನೀಡಿದ್ದು, ಭಾನುವಾರದಿಂದ ಗಾಜಾಗೆ ಹೆಚ್ಚಿನ ನೆರವಿನ ಸಾಮಾಗ್ರಿಗಳು ತಲುಪಲಿವೆ’ ಎಂದು ವಿಶ್ವ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್‌ನ ಅಧಿಕಾರಿ ಅಡ್ಮಿರಲ್ ಬ್ರಾಡ್ ಕೂಪರ್ ಅವರು ಶನಿವಾರ ಗಾಜಾಕ್ಕೆ ಭೇಟಿ ನೀಡಿದರು. ಅಮೆರಿಕದ ಸೈನಿಕರನ್ನು ಗಾಜಾದಲ್ಲಿ ನಿಯೋಜಿಸುವುದಿಲ್ಲ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು.
ಇನ್ನೇನಿದ್ದರೂ ಹಮಾಸ್‌ನವರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕಷ್ಟೆ. ಈ ಮೂಲಕ ಗಾಜಾ ಭಯೋತ್ಪಾದನೆ ಮುಕ್ತವಾಗಬೇಕು. ಇಲ್ಲವಾದಲ್ಲಿ ಮುಂದೆ ಕಷ್ಟವಾಗಲಿದೆಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ
ಇಸ್ರೇಲ್ ಜೈಲಿನಲ್ಲಿರುವ ಗಾಜಾದಲ್ಲಿ ನೆಲ್ಸನ್ ಮಂಡೇಲಾ ಎಂದೇ ಜನಜನಿತವಾಗಿರುವ 66 ವರ್ಷದ ನಾಯಕ ಮರ್ವಾನ್ ಬರ್ಗೌತಿ ಅವರನ್ನು ಬಿಡುಗಡೆ ಮಾಡಬೇಕು ಎನ್ನುವುದು ಹಮಾಸ್‌ನ ಬೇಡಿಕೆ. ಆದರೆ ಅವರ ಬಿಡುಗಡೆಯ ಪ್ರಶ್ನೆಯೇ ಇಲ್ಲ ಎಂದು ಇಸ್ರೇಲ್ ಹೇಳಿದೆ. ಒಪ್ಪಂದದಂತೆ ಬಿಡುಗಡೆ ಮಾಡಲಿರುವ 250 ಕೈದಿಗಳ ಪಟ್ಟಿಯನ್ನು ಇಸ್ರೇಲ್ ಶುಕ್ರವಾರ ಬಿಡುಗಡೆ ಮಾಡಿದೆ. ಇವರು ಸುಮಾರು 20 ವರ್ಷಗಳಿಂದ ಇಸ್ರೇಲ್ ಬಂಧನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಬರ್ಗೌತಿ ಅವರ ಹೆಸರನ್ನು ಇಸ್ರೇಲ್ ಸೇರಿಸಿಲ್ಲ. ವೆಸ್ಟ್ ಬ್ಯಾಂಕ್‌ನ ಮುಖ್ಯಸ್ಥ ಮೊಹಮದ್ ಅಬ್ಬಾಸ್ ಬಳಿಕ ಬರ್ಗೌತಿ ಅವರೇ ಮುಂದಿನ ಮುಖ್ಯಸ್ಥ ಎಂದು ಹೇಳಲಾಗುತ್ತಿದೆ. ಇವರನ್ನು ಬಿಡುವುದು ತಮಗೇ ತೊಂದರೆ ಎನ್ನುವುದು ಇಸ್ರೇಲ್ ಭಾವಿಸಿದೆ. ಹಮಾಸ್ ನಾಯಕರಾಗಿದ್ದ ಸಿನ್ವರ್ ಅವರನ್ನು ಇಸ್ರೇಲ್ 2011ರಲ್ಲಿ ಇಸ್ರೇಲ್ ಬಿಡುಗಡೆ ಮಾಡಿತ್ತು. 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಸಿನ್ವರ್ ಪ್ರಮುಖ ಪಾತ್ರವಹಿಸಿದ್ದರು. ಬರ್ಗೌತಿ ಕೂಡ ತಮ್ಮ ವಿರುದ್ಧ ಮುಂದೆ ಇಂಥಹದ್ದೇ ದಾಳಿಯಲ್ಲಿ ಪಾತ್ರವಹಿಸಬಹುದು ಎನ್ನುವುದು ಇಸ್ರೇಲ್‌ನ ಭೀತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.