ಟೆಲ್ ಅವೀವ್: ಗಾಜಾ ಪಟ್ಟಿಯಿಂದ 20 ಲಕ್ಷದಷ್ಟು ಪ್ಯಾಲೆಸ್ಟೀನಿಯರನ್ನು ಬೇರೆ ದೇಶಗಳಿಗೆ ಸಾಮೂಹಿಕ ಸ್ಥಳಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಯೋಜನೆಯನ್ನು ಕಾರ್ಯಗತಗೊಳಿಸಲು ಇಸ್ರೇಲ್ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ಯಾಲೆಸ್ಟೀನಿಯರು ಸ್ವಯಂಪ್ರೇರಿತವಾಗಿ ಸ್ಥಳಾಂತರಗೊಳ್ಳಲು ಅನುಕೂಲವಾಗುವಂತೆ ಗಾಜಾ ಪಟ್ಟಿಯಲ್ಲಿ ಮಾನವೀಯ ನೆರವಿನ ಕ್ರಮಗಳನ್ನು ಇಸ್ರೇಲ್ ಕೈಗೊಂಡಿದೆ. ಸ್ಥಳಾಂತರಕ್ಕೆ ಸಂಬಂಧಿಸಿ ಆಫ್ರಿಕಾ ದೇಶಗಳ ಮುಖಂಡರೊಂದಿಗೂ ಇಸ್ರೇಲ್ ಮಾತುಕತೆ ನಡೆಸಿದೆ. ಈ ಮಧ್ಯೆ, ಪ್ಯಾಲೆಸ್ಟೀನಿಯರನ್ನು ಗಾಜಾ ಪಟ್ಟಿಯಿಂದ ಬಲವಂತವಾಗಿ ಹೊರ ಹಾಕುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಕೆಲವು ಸಂಘಟನೆಗಳು ಆರೋಪಿಸಿವೆ.
‘ಹಮಾಸ್ ಅನ್ನು ನಿಶ್ಯಸ್ತ್ರೀಕರಣಗೊಳಿಸಿ, ಗಾಜಾವನ್ನು ಬಂಡುಕೋರರಿಂದ ಮುಕ್ತಗೊಳಿಸುತ್ತೇವೆ. ನಂತರ ಡೊನಾಲ್ಡ್ ಟ್ರಂಪ್ ಅವರ ಯೋಜನೆಯಂತೆ ಸ್ವಯಂಪ್ರೇರಿತ ಸ್ಥಳಾಂತರಕ್ಕೆ ಅವಕಾಶ ನೀಡುತ್ತೇವೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಈ ಬಗ್ಗೆ ಚರ್ಚೆಗೆ ಸದಾ ಸಿದ್ಧರಿದ್ದೇವೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
‘ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಅಧಿಕಾರ ಸ್ಥಾಪಿಸದ ನಂತರ, ಇಲ್ಲಿಗೆ ಮರಳಿ ಬರುವುದರ ಬಗ್ಗೆ ನಮಗೆ ಯಾವುದೇ ಖಾತರಿಯಿಲ್ಲ. ಹೀಗಾಗಿ ಸ್ವದೇಶವನ್ನು ತೊರೆಯುವುದು ಸ್ವಯಂಪ್ರೇರಿತ ನಿರ್ಧಾರವಲ್ಲ’ ಎನ್ನುತ್ತಾರೆ ಪ್ಯಾಲೆಸ್ಟೀನಿಯರು.
ಗಾಜಾ ಪಟ್ಟಿ ತೊರೆಯಲು ಬಯಸುವ ಪ್ಯಾಲೆಸ್ಟೀನಿಯರಿಗಾಗಿ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಇಸ್ರೇಲ್ ಸೇನೆಗೆ ಸೂಚನೆ ನೀಡಿದ್ದೇನೆ. ಇದು ’ಹೊರ ಹೋಗಲು’ ಹಲವು ಆಯ್ಕೆಗಳನ್ನು ಹೊಂದಿರುತ್ತದೆ.ಇಸ್ರೇಲ್ ಕಾಟ್ಸ್ ಇಸ್ರೇಲ್‌ನ ರಕ್ಷಣಾ ಸಚಿವ
’ಸ್ಥಳಾಂತರ’ಕ್ಕೆ ಇದು ತಕ್ಕ ಸಮಯ ಎನಿಸುತ್ತದೆ. ಯುದ್ಧದ ನಿಯಮದ ಅನ್ವಯ ಈ ಪ್ರಕ್ರಿಯೆ ನಡೆಯುತ್ತದೆ. ನಾವು ಅವರನ್ನು ಹೊರದಬ್ಬುತ್ತಿಲ್ಲ. ಹೊರಗೆ ಹೋಗಲು ಅವಕಾಶ ನೀಡುತ್ತಿದ್ದೇವೆಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ
’ಇದು ನಮ್ಮ ನೆಲ. ನಮಗೆ ಬೇರೆಲ್ಲೂ ಹೋಗಲು ಜಾಗವಿಲ್ಲ. ನಾವು ಇಲ್ಲೇ ಹುಟ್ಟಿದ್ದೇವೆ ಇಲ್ಲೇ ಸಾಯುತ್ತೇವೆಯೇ ಹೊರತು ಶರಣಾಗವುದಿಲ್ಲಇಸ್ಮಾಯಿಲ್ ಜೈದ್ ಗಾಜಾದಲ್ಲಿರುವ ಪ್ಯಾಲಿಸ್ಟೇನಿಯನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.