ADVERTISEMENT

ಗಾಜಾ ಮೇಲೆ ಇಸ್ರೇಲ್‌ನ ವೈಮಾನಿಕ ದಾಳಿ: 20 ಮಂದಿ ಸಾವು

*ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು

ಏಜೆನ್ಸೀಸ್
Published 23 ಡಿಸೆಂಬರ್ 2024, 13:59 IST
Last Updated 23 ಡಿಸೆಂಬರ್ 2024, 13:59 IST
<div class="paragraphs"><p>ಗಾಜಾ ನಗರದ ಮೇಲೆ ಇಸ್ರೇಲ್‌ ದಾಳಿ (ಸಂಗ್ರಹ ಚಿತ್ರ)</p></div>

ಗಾಜಾ ನಗರದ ಮೇಲೆ ಇಸ್ರೇಲ್‌ ದಾಳಿ (ಸಂಗ್ರಹ ಚಿತ್ರ)

   

ಜೆರುಸಲೇಂ: ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ಸೇನೆ ಭಾನುವಾರ ರಾತ್ರಿ ವೈಮಾನಿಕ ದಾಳಿ ನಡೆಸಿದ್ದು, 20 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಕೀಯ ವಿಭಾಗ ತಿಳಿಸಿದೆ.

‘ಮಾನವೀಯ ನೆರವು ವಲಯ’ದ ವ್ಯಾಪ್ತಿಯಲ್ಲಿದ್ದ ಮುವಾಸಿಯ ಶಿಬಿರದ ಮೇಲೆ ಭಾನುವಾರ ರಾತ್ರಿ ನಡೆದ ವಾಯುದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಸ್ವೀಕರಿಸಿರುವ ನಾಸೀರ್ ಆಸ್ಪತ್ರೆಯ ಸಿಬ್ಬಂದಿ, ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ADVERTISEMENT

ಮತ್ತೆರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ನುಸೈರಾತ್‌ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಿಂದ ಮೂವರು ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ದೀರ್‌ ಅಲ್‌–ಬಲಾಹ್‌ನಲ್ಲಿರುವ ಅಲ್‌ ಅಕ್ಸಾ ಆಸ್ಪತ್ರೆಯು ಖಚಿತಪಡಿಸಿದೆ.

‘ನಿರಾಶ್ರಿತ ಶಿಬಿರಗಳಲ್ಲಿ ನಾಗರಿಕರ ಮಧ್ಯೆ ಬಂಡುಕೋರರು ಆಶ್ರಯ ಪಡೆಯುತ್ತಿದ್ದು, ಅವರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಸೇನೆಯು ತಿಳಿಸಿದೆ. ಭಾನುವಾರ ಇದೇ ಕಾರಣದಿಂದ ಹಮಾಸ್‌ನ ಹಲವು ಮಾನವೀಯ ನೆರವು ವಲಯಗಳು ಇರುವ ಸ್ಥಳಗಳ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದೆ.

ಲೆಬನಾನ್‌–ಹಂಗಾಮಿ ಪ್ರಧಾನಿ ಭೇಟಿ: (ಬೈರೂತ್)– ಇಸ್ರೇಲ್ ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವೆ ಕದನ ವಿರಾಮ ಕೊನೆಗೊಂಡ ಒಂದು ತಿಂಗಳ ನಂತರ, ಲೆಬನಾನ್‌ನ ಹಂಗಾಮಿ ಪ್ರಧಾನಿ ನಜೀಬ್‌ ಮಿಕಾತಿ ಅವರು ಸೇನಾ ನೆಲೆಗಳಿಗೆ ಸೋಮವಾರ ಪ್ರವಾಸ ಆರಂಭಿಸಿದ್ದಾರೆ.

ದಕ್ಷಿಣ ಭಾಗದ ಸೇನಾ ನೆಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಅವರು, ಸದ್ಯದ ಸ್ಥಿತಿಗತಿಗಳನ್ನು ಪ‍ರಿಶೀಲಿಸಿದರು. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಹಿಜ್ಬುಲ್ಲಾ–ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ತಿಂಗಳಾಂತ್ಯದಲ್ಲಿ ಎರಡೂ ದೇಶಗಳು ಸೇನೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿವೆ.

ಇತ್ತೀಚಿನ ದಿನಗಳಲ್ಲಿ ಲೆಬನಾನ್‌ ಪ್ರಮುಖ ಸ್ಥಳಗಳ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ನಜೀಬ್ ಅವರು ಈ ಪ್ರವಾಸ ಕೈಗೊಂಡಿದ್ದಾರೆ.

ಲೆಬನಾನ್‌ನ ಸೇನಾ ಮುಖ್ಯಸ್ಥ ಜೋಸೆಫ್‌ ಔನ್‌ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ನಮಗೆ ಬಹಳಷ್ಟು ಸವಾಲುಗಳಿವೆ. ನಮ್ಮ ನೆಲದ ಮೇಲೆ ಬಲವಂತವಾಗಿ ಆಕ್ರಮಣ ಮಾಡಿರುವ ಶತ್ರುಗಳನ್ನು (ಇಸ್ರೇಲ್‌) ಪೂರ್ಣವಾಗಿ ಹಿಂತಿರುಗುವಂತೆ ಮಾಡುವುದು ನಮ್ಮ ಮುಂದಿನ ಆದ್ಯತೆಯಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.