ADVERTISEMENT

ಇಸ್ರೇಲ್‌–ಹಮಾಸ್ ಸಮರ: ಅಂತರರಾಷ್ಟ್ರೀಯ ನ್ಯಾಯಾಲಯದಿಂದ ವಾರಂಟ್ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 12:50 IST
Last Updated 29 ಏಪ್ರಿಲ್ 2024, 12:50 IST
<div class="paragraphs"><p>ರಫಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದೆ </p></div>

ರಫಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದೆ

   

ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ವಿಚಾರವಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ದೇಶದ ನಾಯಕರ ವಿರುದ್ಧ ವಾರಂಟ್ ಜಾರಿಗೊಳಿಸಬಹುದು ಎಂಬ ಕಳವಳ ಇಸ್ರೇಲ್‌ನ ಅಧಿಕಾರಿಗಳಲ್ಲಿ ವ್ಯಕ್ತವಾಗಿದೆ. ಯುದ್ಧಕ್ಕೆ ಸಂಬಂಧಿಸಿದಂತೆ, ಇನ್ನೊಂದೆಡೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಕೂಡ ಹೆಚ್ಚಾಗುತ್ತಿದೆ.

ಗಾಜಾದ ದಕ್ಷಿಣ ಭಾಗದಲ್ಲಿ ಇರುವ ರಫಾ ಮೇಲೆ ಇಸ್ರೇಲ್ ಭಾನುವಾರ ರಾತ್ರಿ ಮತ್ತು ಸೋಮವಾರ ನಡೆಸಿದ ವಾಯುದಾಳಿಗೆ ಕನಿಷ್ಠ 22 ಮಂದಿ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ಆರು ಮಂದಿ ಮಹಿಳೆಯರು ಹಾಗೂ ಐವರು ಮಕ್ಕಳು ಸೇರಿದ್ದಾರೆ. ಮೃತ‍ಪಟ್ಟ ಮಕ್ಕಳ ಪೈಕಿ ಒಂದು ಮಗು ಜನಿಸಿ ಐದು ದಿನಗಳಷ್ಟೇ ಆಗಿತ್ತು.

ADVERTISEMENT

2014ರ ಇಸ್ರೇಲ್–ಹಮಾಸ್ ಯುದ್ಧದ ಸಂದರ್ಭದಲ್ಲಿ ನಡೆದಿರಬಹುದು ಎನ್ನಲಾದ ಯುದ್ಧಾಪರಾಧಗಳ ಬಗ್ಗೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಮೂರು ವರ್ಷಗಳ ಹಿಂದೆ ತನಿಖೆ ಆರಂಭಿಸಿದೆ. ಆದರೆ, ಶೀಘ್ರವೇ ವಾರಂಟ್‌ ಹೊರಡಿಸಬಹುದು ಎಂಬ ಸೂಚನೆಯನ್ನು ನ್ಯಾಯಾಲಯ ನೀಡಿಲ್ಲ. 

ಇಸ್ರೇಲ್‌ನ ಹಿರಿಯ ರಾಜಕೀಯ ನಾಯಕರು ಹಾಗೂ ಮಿಲಿಟರಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಬಹುದು ಎಂಬ ‘ಊಹಾಪೋಹಗಳ’ ಕುರಿತಾಗಿ ಇಸ್ರೇಲ್‌ನ ದೂತಾವಾಸ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ದೇಶದ ವಿದೇಶಾಂಗ ಸಚಿವಾಲಯವು ಭಾನುವಾರ ರಾತ್ರಿ ಹೇಳಿದೆ. ಆದರೆ ಇಸ್ರೇಲ್ ಅಧಿಕಾರಿಗಳ ಕಳವಳಕ್ಕೆ ಆಧಾರ ಏನು ಎಂಬುದು ಸ್ಪಷ್ಟವಾಗಿಲ್ಲ.

‘ಇಸ್ರೇಲ್‌ನ ಹಿರಿಯ ಅಧಿಕಾರಿಗಳ ವಿರುದ್ಧ ಬಂಧನ ವಾರಂಟ್‌ ಹೊರಡಿಸುವ ಕೆಲಸವನ್ನು ಕೋರ್ಟ್ ಮಾಡುವುದಿಲ್ಲ ಎಂಬುದು ನಮ್ಮ ನಿರೀಕ್ಷೆ. ವಾರಂಟ್ ಹೊರಡಿಸಿದರೆ ಅದು ಹಮಾಸ್ ಮತ್ತು ಇತರ ಉಗ್ರ ಸಂಘಟನೆಗಳಿಗೆ ನೈತಿಕ ಸ್ಥೈರ್ಯ ನೀಡುವ ಕೆಲಸ ಮಾಡುತ್ತದೆ’ ಎಂದು ವಿದೇಶಾಂಗ ಸಚಿವ ಇಸ್ರೇಲ್ ಕತ್ಜ್ ಹೇಳಿದ್ದಾರೆ.

‘ಆತ್ಮರಕ್ಷಣೆಯ ಹಕ್ಕನ್ನು ದುರ್ಬಲಗೊಳಿಸಲು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ನಡೆಸುವ ಯಾವುದೇ ಯತ್ನವನ್ನು ಇಸ್ರೇಲ್ ಒಪ್ಪುವುದಿಲ್ಲ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಹೇಳಿದ್ದಾರೆ.

‘ಮಧ್ಯಪ್ರಾಚ್ಯದ ಏಕೈಕ ಜನತಂತ್ರ ದೇಶದ, ವಿಶ್ವದ ಏಕೈಕ ಯಹೂದಿ ದೇಶದ ಯೋಧರು ಹಾಗೂ ಅಧಿಕಾರಿಗಳನ್ನು ಸೆರೆಹಿಡಿಯುವ ಬೆದರಿಕೆಯು ಅನ್ಯಾಯದ ಕ್ರಮ’ ಎಂದು ಅವರು ಹೇಳಿದ್ದಾರೆ. ಆದರೆ ಅವರು ಈ ರೀತಿ ಹೇಳುವುದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಅಧಿಕಾರವನ್ನು ಇಸ್ರೇಲ್ ಅಥವಾ ಅದರ ಆಪ್ತರಾಷ್ಟ್ರ ಅಮೆರಿಕ ಒಪ್ಪುವುದಿಲ್ಲ. ಆದರೆ, ಅದು ವಾರಂಟ್ ಹೊರಡಿಸಿದಲ್ಲಿ, ಇತರ ದೇಶಗಳಲ್ಲಿ ಇರುವ ಇಸ್ರೇಲ್‌ನ ಅಧಿಕಾರಿಗಳು ಬಂಧನದ ಭೀತಿ ಎದುರಿಸಬೇಕಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.