ADVERTISEMENT

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 52 ಸಾವು

ಏಜೆನ್ಸೀಸ್
Published 26 ಮೇ 2025, 14:23 IST
Last Updated 26 ಮೇ 2025, 14:23 IST
<div class="paragraphs"><p>ಗಾಜಾದಲ್ಲಿ ಹಾನಿಗೊಳಗಾದ ಶಾಲೆಯನ್ನು&nbsp;ಪ್ಯಾಲೆಸ್ಟೀನಿ ನಾಗರಿಕರು ಪರಿಶೀಲಿಸಿದರು&nbsp; ಪಿಟಿಐ </p></div>

ಗಾಜಾದಲ್ಲಿ ಹಾನಿಗೊಳಗಾದ ಶಾಲೆಯನ್ನು ಪ್ಯಾಲೆಸ್ಟೀನಿ ನಾಗರಿಕರು ಪರಿಶೀಲಿಸಿದರು  ಪಿಟಿಐ

   

ದೇರ್‌ ಅಲ್‌ ಬಲಾಹ್‌ (ಗಾಜಾ ಪಟ್ಟಿ): ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 52 ಜನರು ಸೋಮವಾರ ಮೃತಪಟ್ಟಿದ್ದಾರೆ.

ನಿರಾಶ್ರಿತ ಶಿಬಿರವಾಗಿ ಪರಿವರ್ತಿಸಿರುವ ಶಾಲೆಯಲ್ಲಿ ಮಲಗಿದ್ದ 36 ಜನ ನಾಗರಿಕರು ಬಾಂಬ್‌ ದಾಳಿಯಿಂದ ಚಿರನಿದ್ರೆಗೆ ಜಾರಿದ್ದಾರೆ. ಆದರೆ, ಇದನ್ನು ಅಲ್ಲಗಳೆದಿರುವ ಇಸ್ರೇಲ್‌ ಸೇನೆ, ಶಾಲೆಯನ್ನು ಅಡಗುದಾಣವಾಗಿಸಿಕೊಂಡಿದ್ದ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿ, ಹಮಾಸ್‌ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ADVERTISEMENT

ಮೃತರಲ್ಲಿ ಒಂದೇ ಕುಟುಂಬದ ಆರು ಮಂದಿ ಇದ್ದು, ತಂದೆ ಮತ್ತು ಅವರ ಐವರು ಮಕ್ಕಳು ಸೇರಿದ್ದಾರೆ. ಗಾಜಾ ನಗರದ ನೆರೆಯ ದರಾಜ್‌ನಲ್ಲಿರುವ ಈ ಶಾಲೆಯ ಮೇಲೆ ನಡೆದಿರುವ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ತುರ್ತು ಸೇವೆಯ ಮುಖ್ಯಸ್ಥ ಫಾಹ್ಮಿ ಅವಾದ್ ಹೇಳಿದ್ದಾರೆ. ಗಾಜಾ ನಗರದ ಶಿಫಾ ಮತ್ತು ಅಲ್-ಅಹ್ಲಿ ಆಸ್ಪತ್ರೆಗಳು ಸಾವಿನ ಸಂಖ್ಯೆಯನ್ನು ದೃಢಪಡಿಸಿವೆ.

ಉತ್ತರ ಗಾಜಾದ ಜಬಾಲಿಯಲ್ಲಿರುವ ಮನೆಯೊಂದರ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 16 ಜನರು ಹತರಾಗಿದ್ದಾರೆ ಎಂದು ಶಿಫಾ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಈವರೆಗೆ ಸುಮಾರು 54 ಸಾವಿರ ಪ್ಯಾಲೆಸ್ಟೀನಿಯನ್ನರು ಹತರಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.