ADVERTISEMENT

ಯುವತಿ ಸಾವು: ಇಟಲಿಯಲ್ಲಿ 60ರ ಒಳಗಿನವರಿಗೆ ಅಸ್ಟ್ರಾಜೆನೆಕಾ ಲಸಿಕೆ ನಿಷೇಧ

ರಾಯಿಟರ್ಸ್
Published 12 ಜೂನ್ 2021, 7:07 IST
Last Updated 12 ಜೂನ್ 2021, 7:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರೋಮ್‌: ಅಸ್ಟ್ರಾಜೆನೆಕಾದ ಕೋವಿಡ್‌ 19 ಲಸಿಕೆಯನ್ನು ಇಟಲಿಯಲ್ಲಿ ಇನ್ನು 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಲಸಿಕೆ ಪಡೆದ ಯುವತಿಯೊಬ್ಬರು ರಕ್ತಹೆಪ್ಪುಗಟ್ಟಿ ಮೃತಪಟ್ಟ ಹಿನ್ನೆಲೆಯಲ್ಲಿ ಇಟಲಿ ಈ ತೀರ್ಮಾನಕ್ಕೆ ಬಂದಿದೆ.

ಮೇ 25ರಂದು ಅಸ್ಟ್ರಾಜೆನೆಕಾದ ಲಸಿಕೆ ಪಡೆದಿದ್ದ ಕ್ಯಾಮಿಲಾ ಕ್ಯಾನೆಪಾ ಎಂಬ ಹೆಸರಿನ 18 ವರ್ಷದ ಯುವತಿಯು ಗುರುವಾರ ಮೃತಪಟ್ಟಿದ್ದಾರೆ. ಈ ವಿಚಾರ ಅಲ್ಲಿನ ಮಾಧ್ಯಮಗಳು ಮತ್ತು ರಾಜಕೀಯದ ವಲಯದ ಟೀಕೆಗೆ ಗುರಿಯಾಗಿದೆ. ಆಂಗ್ಲೋ-ಸ್ವೀಡಿಷ್ ಕಂಪನಿಯ ಲಸಿಕೆಯನ್ನು ಆತಂಕಗಳ ಹೊರತಾಗಿಯೂ ಎಲ್ಲಾ ವಯಸ್ಸಿನವರಿಗೆ ಬಳಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಟೀಕೆಗಳ ಹಿನ್ನೆಲೆಯಲ್ಲಿ ತನ್ನ ನಿರ್ಧಾರ ಪ್ರಕಟಿಸಿರುವ ಇಟಲಿ ಸರ್ಕಾರ, ಇನ್ನು ಮುಂದೆ ಕೇವಲ 60 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಅಸ್ಟ್ರಾಜೆನೆಕಾದ ಲಸಿಕೆ ನೀಡುವುದಾಗಿ ತಿಳಿಸಿದೆ.

ADVERTISEMENT

ಅಸ್ಟ್ರಾಜೆನೆಕಾದ ಮೊದಲ ಡೋಸ್ ಪಡೆದ 60 ವರ್ಷದೊಳಗಿನ ಜನರಿಗೆ ಎರಡನೇ ಡೋಸ್‌ ವೇಳೆ ಬೇರೆ ಲಸಿಕೆ ನೀಡುವುದಾಗಿ ಸರ್ಕಾರದ ಮುಖ್ಯ ವೈದ್ಯಕೀಯ ಸಲಹೆಗಾರ ಫ್ರಾಂಕೊ ಲೊಕಾಟೆಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಅಸ್ಟ್ರಾಜೆನೆಕಾ ಸಂಸ್ಥೆ ಈ ವರೆಗೆ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.