ADVERTISEMENT

ತಜಕಿಸ್ತಾನದ‌ ಸಹಕಾರಕ್ಕೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಶ್ಲಾಘನೆ

ಸ್ಪೀಕರ್‌, ರಕ್ಷಣಾ ಸಚಿವರ ಜತೆಗೆ ಮಾತುಕತೆ

ಪಿಟಿಐ
Published 31 ಮಾರ್ಚ್ 2021, 8:33 IST
Last Updated 31 ಮಾರ್ಚ್ 2021, 8:33 IST
ದುಶಾಂಬೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತಜಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹಮಾನ್ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ದುಶಾಂಬೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತಜಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹಮಾನ್ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು.   

ದುಶಾಂಬೆ: ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಬುಧವಾರ ತಜಕಿಸ್ತಾನದ ಸ್ಪೀಕರ್ ಝೋಕಿರ್ಜೊಡಾ ಮಹ್ಮಡ್ತೊಹಿರ್ ಜೊಯಿರ್ ಮತ್ತುರಕ್ಷಣಾ ಸಚಿವ ಕರ್ನಲ್ ಜನರಲ್‌ ಶೆರ್ಲಿ ಮಿರ್ಜೊಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ಸಹಕಾರ ವೃದ್ಧಿಗೆ ನೀಡಿರುವ ಗಟ್ಟಿಯಾದ ಸಂಸದೀಯ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್, ‘ಆಫ್ಗಾನಿಸ್ಥಾನದಲ್ಲಿರುವ ಪರಿಸ್ಥಿತಿ ಮತ್ತು ತಜಕಿಸ್ತಾನ– ಭಾರತದ ನಡುವಿನ ದ್ವಿಪಕ್ಷೀಯ ಸಹಕಾರ ಕುರಿತು ಅಧ್ಯಕ್ಷ ರಾಹ್‌ಮೊನ್‌ ಅವರೊಂದಿಗೆ ಚರ್ಚೆ ನಡೆಸಿದ್ದೇನೆ‘ ಎಂದು ಹೇಳಿದರು.

‘ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ ಕುರಿತ ಸಹಕಾರವನ್ನು ಹೇಗೆ ವಿಸ್ತರಿಸಬಹುದು ಎಂಬುದರ ಬಗ್ಗೆ ಚರ್ಚಿಸಿದ್ದೇವೆ. ರಾಷ್ಟ್ರಗಳ ನಡುವಿನ ರಾಜಕೀಯ ಸಹಕಾರ ಮತ್ತು ಸಾಮರ್ಥ್ಯ ಅಭಿವೃದ್ಧಿ ಹಾಗೂ ಆಫ್ಗಾನಿಸ್ಥಾನದೊಂದಿಗೆ ಹೇಗೆ ಕೆಲಸ ಮಾಡಬಹುದು ಎಂಬ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ‘ ಎಂದು ಜೈಶಂಕರ್ ತಿಳಿಸಿದರು.

ADVERTISEMENT

ಕೋವಿಡ್‌ 19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ತಜಕಿಸ್ತಾನದೊಂದಿಗೆ ಭಾರತ ಕೈಜೋಡಿಸಲಿದೆ ಎಂದರು.

‘ತಜಕಿಸ್ತಾನದ ರಕ್ಷಣಾ ಸಚಿವ ಕರ್ನಲ್‌ ಜನರಲ್ ಶೆರ್ಲಿ ಮಿರ್ಜೊ ಅವರೊಂದಿಗೆ ಫಲದಾಯಕವಾದ ಚರ್ಚೆಗಳು ನಡೆದವು. ಈ ವೇಳೆ ನಮ್ಮ ದೇಶದ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸುವ ಕುರಿತು ಚರ್ಚಿಸಲಾಯಿತು‘ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.