ADVERTISEMENT

ಸಿಂಗಪುರ ಪ್ರಧಾನಿ– ಜೈಶಂಕರ್‌ ಭೇಟಿ

ಪಿಟಿಐ
Published 25 ಮಾರ್ಚ್ 2024, 14:21 IST
Last Updated 25 ಮಾರ್ಚ್ 2024, 14:21 IST
ಸಿಂಗಪುರ ಪ್ರಧಾನಿ ಲೀ ಸೀಯೆನ್‌ ಲೂಂಗ್‌ ಅವರ ಜೊತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌
ಸಿಂಗಪುರ ಪ್ರಧಾನಿ ಲೀ ಸೀಯೆನ್‌ ಲೂಂಗ್‌ ಅವರ ಜೊತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌   

ಸಿಂಗಪುರ: ಸಿಂಗಪುರ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಅಲ್ಲಿಯ ಪ್ರಧಾನಿ ಲೀ ಸೀಯೆನ್‌ ಲೂಂಗ್‌ ಅವರನ್ನು ಸೋಮವಾರ ಭೇಟಿ ಮಾಡಿದರು. ಈ ವೇಳೆ, ಭಾರತ ಮತ್ತು ಸಿಂಗಪುರ ನಡುವಿನ ಪಾಲುಗಾರಿಕೆ ಉತ್ತಮಪಡಿಸುವ ಕುರಿತು ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದರು.

ಭೇಟಿ ವೇಳೆ ಸಿಂಗಪುರದ ವಿದೇಶಾಂಗ ಸಚಿವ ವಿವಿಯನ್‌ ಬಾಲಕೃಷ್ಣ ಮತ್ತು ಇತರ ಹಿರಿಯ ಸಚಿವರೂ ಉಪಸ್ಥಿತರಿದ್ದರು. ಇಂಡೋ–ಪೆಸಿಫಿಕ್ ಮತ್ತು ಪೂರ್ವ ಏಷ್ಯಾ ಪ್ರದೇಶದ ಸ್ಥಿತಿಗತಿ ಕುರಿತೂ ಚರ್ಚಿಸಲಾಯಿತು.

ಈ ವಿಷಯವಾಗಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಜೈಶಂಕರ್‌ ಅವರು, ‘ಪ್ರಧಾನಿ ಲೀ ಸೀಯೆನ್ ಲೂಂಗ್‌ ಅವರನ್ನು ಭೇಟಿಯಾದೆನು. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಶುಭಾಶಯವನ್ನು ಅವರಿಗೆ ತಿಳಿಸಿದೆ. ಜಗತ್ತಿನ ಆಗುಹೋಗುಗಳ ಕುರಿತ ಅವರ ದೃಷ್ಟಿಕೋನವನ್ನು ಗೌರವಿಸುತ್ತೇನೆ’ ಎಂದಿದ್ದಾರೆ.

ADVERTISEMENT

‘ಭಾರತ ಮತ್ತು ಸಿಂಗಪುರ ನಡುವಣ ದ್ವಿಪಕ್ಷೀಯ ಸಂಬಂಧದ ಕುರಿತು ಲೀ ಅವರಿಗಿರುವ ಸಕಾರಾತ್ಮಕ ಮನೋಭಾವವೇ ನಮ್ಮ ಬಾಂಧವ್ಯಕ್ಕೆ ಬಲ’ ಎಂದೂ ಹೇಳಿದ್ದಾರೆ.

ಅಲ್ಲಿಯ ವಾಣಿಜ್ಯ ಮತ್ತು ಉದ್ಯಮ ಸಚಿವ ಗಾನ್‌ ಕಿಮ್‌ ಯಾಂಗ್‌ ಹಾಗೂ ರಾಷ್ಟ್ರೀಯ ಭದ್ರತೆಯ ಸಂಯೋಜಕ ಸಚಿವ ಟಿಯೋ ಚೀ ಹೀನ್‌ ಅವರ ಜೊತೆಯೂ ಜೈಶಂಕರ್‌ ಸಭೆ ನಡೆಸಿದರು.

‘ವಾಣಿಜ್ಯ, ಸೆಮಿಕಂಡಕ್ಟರ್‌, ಬಾಹ್ಯಾಕಾಶ, ಹಸಿರು ಇಂಧನ, ಪೂರೈಕೆ ಸರಪಳಿ ಮತ್ತು ರಕ್ಷಣಾ ಕ್ಷೇತ್ರದ ಕುರಿತು ಸಿಂಗ‍ಪುರದ ವಾಣಿಜ್ಯ ಮತ್ತು ಉದ್ಯಮ ಸಚಿವರ ಜೊತೆ ಚರ್ಚೆ ನಡೆಸಿದೆ. ಈ ಚರ್ಚೆಗಳನ್ನು ಭಾರತ– ಸಿಂಗಪುರ ಸಚಿವರ ದುಂಡುಮೇಜಿನ ಸಭೆಯಲ್ಲೂ ಮುಂದುವರೆಸುವ ನಿರೀಕ್ಷೆ ಇದೆ’ ಎಂದೂ ಪೋಸ್ಟ್‌ ಮಾಡಿದ್ದಾರೆ.

ಜೈಶಂಕರ್‌ ಅವರ ಮೂರು ದಿನಗಳ ಸಿಂಗಪುರ ಪ್ರವಾಸ ಸೋಮವಾರ ಅಂತ್ಯಗೊಂಡಿದೆ. ಇಲ್ಲಿಂದ ಅವರು ಫಿಲಿಪ್ಪೀನ್ಸ್‌ ಮತ್ತು ಮಲೇಷ್ಯಾಕ್ಕೆ ತೆರಳಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.