ADVERTISEMENT

ಜಪಾನ್‌ನ ಸ್ಯಾಡೊ ಚಿನ್ನದ ಗಣಿಗೆ ಯುನೆಸ್ಕೊ ಮನ್ನಣೆ: ಸಮಿತಿ ನಿರ್ಧಾರ

2ನೇ ವಿಶ್ವಯುದ್ಧದ ವೇಳೆ ಕೊರಿಯಾ ಕಾರ್ಮಿಕರ ಮೇಲಿನ ದೌರ್ಜನ್ಯ ಒಪ್ಪಿದ ಜಪಾನ್‌

ಏಜೆನ್ಸೀಸ್
Published 27 ಜುಲೈ 2024, 15:13 IST
Last Updated 27 ಜುಲೈ 2024, 15:13 IST
<div class="paragraphs"><p>ಜಪಾನ್‌ನ ಸ್ಯಾಡೊ ದ್ವೀಪದ ಚಿನ್ನದ ಗಣಿ</p></div>

ಜಪಾನ್‌ನ ಸ್ಯಾಡೊ ದ್ವೀಪದ ಚಿನ್ನದ ಗಣಿ

   

ಚಿತ್ರಕೃಪೆ: ಯುನೆಸ್ಕೊ 

ಟೋಕಿಯೊ: ಯುನೆಸ್ಕೊ ವಿಶ್ವ ಪಾರಂಪಾರಿಕ ಸಮಿತಿಯು ಜಪಾನ್‌ನ ಸ್ಯಾಡೊ ದ್ವೀಪದಲ್ಲಿರುವ ವಿವಾದಾತ್ಮಕ ಚಿನ್ನದ ಗಣಿಯನ್ನು ಸಾಂಸ್ಕೃತಿಕ ಪಾರಂಪರಿಕ ತಾಣವಾಗಿ ನೋಂದಾಯಿಸಲು ಶನಿವಾರ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ಈ ಗಣಿಯಲ್ಲಿ ಎರಡನೇ ವಿಶ್ವಸಮರದಲ್ಲಿ ಕೊರಿಯಾದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ ಕರಾಳ ಇತಿಹಾಸದ ಚಿತ್ರಣವನ್ನು ಪ್ರದರ್ಶಿಸಲು ಜಪಾನ್‌ ಒಪ್ಪಿದ ನಂತರ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ. ಜಪಾನ್‌ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧಗಳಲ್ಲಿ ಆಗಿರುವ ಸುಧಾರಣೆಯನ್ನು ಈ ನಿರ್ಧಾರ ಸೂಚಿಸುತ್ತದೆ.

ಉತ್ತರ ಜಪಾನ್‌ನ ನಿಗಾಟಾದ ಕರಾವಳಿಯ ಸ್ಯಾಡೊ ದ್ವೀಪದಲ್ಲಿರುವ ಗಣಿ 1989ರಲ್ಲಿ ಮುಚ್ಚುವ ಮೊದಲು, ಸುಮಾರು ನಾಲ್ಕು ಶತಮಾನಗಳ ಕಾಲ ಕಾರ್ಯನಿರ್ವಹಿಸಿತ್ತು. ವಿಶ್ವದಲ್ಲೇ ಅತಿದೊಡ್ಡ ಚಿನ್ನದ ಉತ್ಪಾದಕ ಎನಿಸಿತ್ತು. ಇದು ಜಪಾನ್‌ನ ಯುದ್ಧಕಾಲದಲ್ಲಿ ಕೊರಿಯಾದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ ಕರಾಳ ಇತಿಹಾಸವನ್ನೂ ಹೊಂದಿದೆ.   

ನವದೆಹಲಿಯಲ್ಲಿ ಶನಿವಾರ ನಡೆದ ವಾರ್ಷಿಕ ಸಭೆಯಲ್ಲಿ ದಕ್ಷಿಣ ಕೊರಿಯಾ ಪ್ರತಿನಿಧಿ ಒಳಗೊಂಡ ಸಮಿತಿಯ ಸದಸ್ಯರು, ಯುನೆಸ್ಕೊ ಪಟ್ಟಿಗೆ ಸೇರಿಸುವ ನಿರ್ಧಾರಕ್ಕೆ ಸರ್ವಾನುಮತದ ಬೆಂಬಲ ಸಿಕ್ಕಿದೆ ಎಂದು ತಿಳಿಸಿದ್ದಾರೆ.

‘ಈ ಗಣಿಯನ್ನು ಯುನೆಸ್ಕೊ ಪಾರಂಪಾರಿಕ ಪಟ್ಟಿಗೆ ಸೇರಿಸಲು ಅಗತ್ಯವಿರುವ ಎಲ್ಲ ತಿದ್ದುಪಡಿಗಳನ್ನು ಮಾಡಲಾಗಿದೆ. ಹೆಚ್ಚುವರಿ ಮಾಹಿತಿಯನ್ನು ಜಪಾನ್‌ ಒದಗಿಸಿದೆ. ಅಲ್ಲದೆ, ಈ ಗಣಿಗೆ ಸಂಬಂಧಿಸಿ ಯುದ್ಧಕಾಲದ ಇತಿಹಾಸದ ಬಗ್ಗೆ ದಕ್ಷಿಣ ಕೊರಿಯಾದೊಂದಿಗೆ ಸಮಾಲೋಚನೆಯನ್ನು ನಡೆಸಿದೆ’ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.

‘ಕೊರಿಯಾದ ಕಾರ್ಮಿಕರು ಸ್ಯಾಡೊ ದ್ವೀಪದ ಚಿನ್ನದ ಗಣಿಯಲ್ಲಿ ಅನುಭವಿಸಿದ ಗಂಭೀರ ಸ್ವರೂಪದ ಪರಿಸ್ಥಿತಿಗಳು ಮತ್ತು ಕಷ್ಟಗಳನ್ನು ಸ್ಮರಿಸಲು ಜಪಾನ್ ಹೊಸ ಪ್ರದರ್ಶನ ಸಾಮಗ್ರಿಯನ್ನು ಸ್ಥಾಪಿಸಿದೆ. ಈ ಗಣಿಯಲ್ಲಿ ಕೆಲಸ ಮಾಡಿದ ಎಲ್ಲ ಕಾರ್ಮಿಕರ ಸ್ಮರಣೀಯ ಸೇವೆಯನ್ನು ವಾರ್ಷಿಕವಾಗಿ ಈ ತಾಣದಲ್ಲಿ ಸ್ಮರಿಸಲಾಗುವುದು’ ಎಂದು ಜಪಾನಿನ ಅಧಿಕಾರಿಯೊಬ್ಬರು ಸಭೆಗೆ ತಿಳಿಸಿದರು.  

ಗಣಿ ಶಾಫ್ಟ್‌ನಲ್ಲಿ ಕೊರಿಯಾದ ಕಾರ್ಮಿಕರನ್ನು ಹೆಚ್ಚು ಅಪಾಯಕಾರಿ ಸ್ಥಿತಿಗೆ ದೂಡಲಾಗಿತ್ತು. ಕಾರ್ಮಿಕರಲ್ಲಿ ಹಲವರಿಗೆ ಅಲ್ಪ ಪ್ರಮಾಣದಲ್ಲಿ ಪಡಿತರ ಆಹಾರ ನೀಡಲಾಗಿತ್ತು ಮತ್ತು ಯಾವುದೇ ರಜೆ ಸಹ ನೀಡಲಿಲ್ಲ. ಇದರಿಂದಾಗಿ ಕೆಲವು ಕಾರ್ಮಿಕರು ಸತ್ತರು ಎಂಬ ಸಂಗತಿಯನ್ನು ಜಪಾನ್ ಈಗ ಒಪ್ಪಿಕೊಂಡಿದೆ.

ಸಂಪೂರ್ಣ ವಿವರ ಕೇಳಲಾಗಿತ್ತು: ವಿಶ್ವ ಪಾರಂಪಾರಿಕ ತಾಣದ ಪಟ್ಟಿಗೆ ಸ್ಯಾಡೊ ಚಿನ್ನದ ಗಣಿಯನ್ನು ಸೇರಿಸಬೇಕೆಂದು ಜಪಾನ್‌ ಕಳೆದ ವರ್ಷ ಬಯಸಿತ್ತು. ಆದರೆ, ‘ಸಲ್ಲಿಸಿರುವ ದಾಖಲೆಗಳು ಸಾಕಾಗುವುದಿಲ್ಲ ಮತ್ತು ಇನ್ನಷ್ಟು ಮಾಹಿತಿಯ ಅಗತ್ಯವಿದೆ’ ಎಂದು ಯುನೆಸ್ಕೊ ಸಮಿತಿಗೆ ಸಲಹೆ ನೀಡುವ ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ಮಂಡಳಿಯು ಜೂನ್‌ನಲ್ಲಿ ಜಪಾನ್‌ಗೆ ಸ್ಯಾಡೊ ಚಿನ್ನದ ಗಣಿಗಳ ಸಂಪೂರ್ಣ ವಿವರ ನೀಡಲು ಸೂಚಿಸಿತ್ತು.

ಕೈಗಾರಿಕೀಕರಣದ ಮೊದಲು ಮತ್ತು ನಂತರದ ಗಣಿಗಾರಿಕೆ ತಂತ್ರಜ್ಞಾನದಲ್ಲಿನ ಪ್ರಗತಿಗಾಗಿ ಸ್ಯಾಡೊ ದ್ವೀಪದ ಚಿನ್ನದ ಗಣಿಯನ್ನು ಜಪಾನಿನ ಅಧಿಕಾರಿಗಳು ಶ್ಲಾಘಿಸಿ, ಯುನೆಸ್ಕೊ ಪಟ್ಟಿಗೆ ಸೇರಿಸಲು ಮನವಿ ಮಾಡಿದ್ದರು. ಆದರೆ, ಎರಡನೇ ವಿಶ್ವ ಸಮರದಲ್ಲಿ ಕೊರಿಯಾದ ಕಾರ್ಮಿಕರನ್ನು ಈ ಗಣಿಗಳಲ್ಲಿ ದುರುಪಯೋಗ ಮಾಡಿಕೊಂಡ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.