ADVERTISEMENT

ಜಪಾನ್‌ನ ಪ್ರಧಾನಿಯಾಗಲಿದ್ದಾರೆ ರೈತನ ಮಗ ಸುಗಾ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 10:59 IST
Last Updated 14 ಸೆಪ್ಟೆಂಬರ್ 2020, 10:59 IST
ಯೊಶಿಹಿಡೆ ಸುಗಾ
ಯೊಶಿಹಿಡೆ ಸುಗಾ    

ಟೋಕಿಯೊ: ಜಪಾನ್‌ ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ದೀರ್ಘಕಾಲದ ಒಡನಾಡಿ ಯೊಶಿಹಿಡೆ ಸುಗಾ ಅವರು ಆಡಳಿತಾರೂಢ ಲಿಬರಲ್‌ ಡೆಮಕ್ರಟಿಕ್‌ ಪಕ್ಷದ (ಎಲ್‌ಡಿಪಿಯ) ನಾಯಕರಾಗಿ ಸೋಮವಾರ ಆಯ್ಕೆಯಾಗಿದ್ದಾರೆ.

ಡೆಮಕ್ರಟಿಕ್‌ ಪಕ್ಷದ ನಾಯಕತ್ವಕ್ಕಾಗಿ ಸೋಮವಾರ ಚುನಾವಣೆ ನಡೆಯಿತು. ಇದರಲ್ಲಿ ಸುಗಾ ಆಯ್ಕೆಯಾದರು. ಈ ವಾರ ಜಪಾನ್‌ ಸಂಸತ್‌ನಲ್ಲಿ ಪ್ರಧಾನಿಯ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಈ ಆಯ್ಕೆಯ ಹಾದಿ ಸದ್ಯ ಸುಗಾ ಅವರಿಗೆ ಸುಗಮವಾಗಿದೆ. ಸಂಸತ್‌ನಲ್ಲಿ ಲಿಬರಲ್‌ ಡೆಮಕ್ರಟಿಕ್‌ ಪಕ್ಷವೇ ಬಹುಮತ ಹೊಂದಿದ್ದು, ಸುಗಾ ಬಹುತೇಕ ಪ್ರಧಾನಿಯಾದಂತೆಯೇ.

ಹಿಂದಿನ ಪ್ರಧಾನಿ ಅಬೆ ಅವರ 8 ವರ್ಷಗಳ ಅಧಿಕಾರವಧಿಯಲ್ಲಿ ಕ್ಯಾಬಿನೆಟ್‌ ಕಾರ್ಯದರ್ಶಿಯಂಥ ಪ್ರಭಾವಿ ಸ್ಥಾನದಲ್ಲಿ 71 ವರ್ಷದ ಸುಗಾ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಮುಂದಿನ ನಡೆಗಳ ಕುರಿತು ಸುಗಾ ಮಾತನಾಡಿದ್ದಾರೆ. ಅಬೆ ಅವರ, ‘ಅಬೆನಾಮಿಕ್ಸ್‌’ನ ಭಾಗವಾಗಿದ್ದ ಸರಳ ವಿತ್ತೀಯ ನೀತಿಯನ್ನು ಮುಂದುವರಿಸುವುದಾಗಿಯೂ, ಸರ್ಕಾರದ ಖರ್ಚುವೆಚ್ಚ, ಸುಧಾರಣೆಯ ವಿಚಾರದಲ್ಲಿ ಅಬೆ ಅವರು ಅನುಸರಿಸುತ್ತಿದ್ದ ನಡೆಗಳನ್ನು ಪಾಲಿಸುವುದಾಗಿಯೂ, ಅಮೆರಿಕದೊಂದಿಗಿನ ರಕ್ಷಣಾ ಮೈತ್ರಿಯಲ್ಲಿ ರಾಜತಾಂತ್ರಿಕ ಮಾರ್ಗ ಕೇಂದ್ರಿತ ನಿಲುವು ಹೊಂದಿರುವುದಾಗಿಯೂ ಸುಗಾ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಸುಗಾ ಅವರು ಗ್ರಾಮೀಣ ಜಪಾನ್‌ನ ಉತ್ತರ ಪ್ರಾಂತ್ಯ ಒಗಾಚಿ ಎಂಬಲ್ಲಿನನೇರಳೆ ಬೆಳೆಗಾರ ಕುಟುಂಬದವರು. ಅವರ ತಂದೆ ನೇರಳೆ ಬೆಳೆಗಾರರಾಗಿದ್ದರು. ಸದ್ಯ ಸುಗಾ ಲಿಬರಲ್‌ ಡೆಮಕ್ರಟಿಕ್‌ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರೈತನ ಮಗನೊಬ್ಬ ಜಪಾನ್‌ ಪ್ರಧಾನಿಯಾಗುವುದು ಸನ್ನಿಹಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.