ವಾಷಿಂಗ್ಟನ್: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಅಮೆರಿಕ–ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಬಲಪಡಿಸುವಲ್ಲಿ ಸಿಂಗ್ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಬೈಡನ್ ಮತ್ತು ಅವರ ಪತ್ನಿ ಜಿಲ್ ಬೈಡನ್, ‘ಸಿಂಗ್ ಅವರ ದೂರದೃಷ್ಟಿಯ ಫಲವಾಗಿ ಇಂದು ಅಮೆರಿಕ ಮತ್ತು ಭಾರತದ ನಡುವೆ ಅಭೂತಪೂರ್ವ ಮಟ್ಟದ ಸಹಕಾರ ಸಾಧ್ಯವಾಗಿದೆ’ ಎಂದಿದ್ದಾರೆ.
‘ಅಮೆರಿಕ-ಭಾರತ ನಾಗರಿಕ ಪರಮಾಣು ಒಪ್ಪಂದ ರೂಪಿಸುವುದರಿಂದ ಹಿಡಿದು ಇಂಡೋ-ಪೆಸಿಫಿಕ್ ರಾಷ್ಟ್ರಗಳ ನಡುವೆ ಮೊದಲ ಕ್ವಾಡ್(QUAD) ಪ್ರಾರಂಭಿಸುವವರೆಗೂ ಅವರು ಕೆಲಸ ಮಾಡಿದ್ದರು. ನೈಜ ರಾಜಕಾರಣಿಯಾಗಿದ್ದ ಸಿಂಗ್ ಅವರು ಸಮರ್ಪಿತ ಸಾರ್ವಜನಿಕ ಸೇವಕನಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸರಳ ಮತ್ತು ವಿನಮ್ರತೆಯ ವ್ಯಕ್ತಿತ್ವ ಅವರದ್ದಾಗಿತ್ತು’ ಎಂದು ಹೇಳಿದ್ದಾರೆ.
‘2013ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ನಾನು ಮತ್ತು ಅವರು ಭಾರತ–ಅಮೆರಿಕ ಸಂಬಂಧದ ಬಗ್ಗೆ ಚರ್ಚಿಸಿದ್ದೆವು’ ಎಂದು ನೆನಪಿಸಿಕೊಂಡಿದ್ದಾರೆ.
‘ಈ ಸಂಕಷ್ಟದ ಸಮಯದಲ್ಲಿ ಸಿಂಗ್ ಅವರ ಕುಟುಂಬ ಸದಸ್ಯರಿಗೆ ಮತ್ತು ಭಾರತದ ಜನತೆಗೆ ನಾನು ಮತ್ತು ಜಿಲ್ ಸಂತಾಪ ಸೂಚಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.