ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಎರಡನೇ ವಿಶ್ವಯುದ್ಧ ಕಾಲದ ಅಧಿಕಾರವನ್ನು ಚಲಾಯಿಸಿ ಯಾವುದೇ ವಿಚಾರಣೆ ಇಲ್ಲದೆ ವೆನಿಜುವೆಲಾ ನಾಗರಿಕರನ್ನು ಗಡೀಪಾರು ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಫೆಡರಲ್ ನ್ಯಾಯಲಯವೊಂದು ತಡೆ ನೀಡಿದೆ.
ಅಲ್ಲದೆ ಅವರನ್ನು ಗಡೀಪಾರು ಮಾಡುವ ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಕೂಡಲೇ ಹಿಂದಿರುಗಬೇಕು ಎಂದೂ ಆದೇಶಿಸಿದ್ದಾರೆ.
‘ಟ್ರೆನ್ ಡಿ ಅರಾಗುವಾ’ ಎಂದು ಕರೆಯಲ್ಪಡುವ ಅಂತರರಾಷ್ಟ್ರೀಯ ಗ್ಯಾಂಗ್‌ನಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ವೆನೆಜುವೆಲಾ ನಾಗರಿಕರನ್ನು ತ್ವರಿತವಾಗಿ ಗಡೀಪಾರು ಮಾಡಲು ‘ಏಲಿಯನ್ ವೈರಿಸ್ ಕಾಯ್ದೆ’ಗೆ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಎರಡನೇ ಮಹಾಯುದ್ಧದ ಬಳಿಕ ಈ ಕಾಯ್ದೆಯನ್ನು ಬಳಕೆ ಮಾಡಿದ್ದು ಇದೇ ಮೊದಲು.
ಶತ್ರು ದೇಶಗಳ ನಾಗರಿಕರನ್ನು ಅಮೆರಿಕದಿಂದ ನಿಷೇಧಿಸಲು ಈ ಕಾಯ್ದೆಯನ್ನು ಈವೆರೆಗೆ ಮೂರು ಬಾರಿ ಮಾತ್ರ ಬಳಕೆ ಮಾಡಲಾಗಿದೆ. ಅದೂ ಯುದ್ಧ ಘೋಷಣೆಯಾದ ಸಮಯದಲ್ಲಿ ಮಾತ್ರ.
ಟ್ರಂಪ್ ಅವರ ನಿರ್ಧಾರವನ್ನು ಪ್ರಶ್ನಿಸಿ ನಾಗರಿಕ ಹಕ್ಕು ಗುಂಪುಗಳು ಶನಿವಾರ ಕೋರ್ಟ್ ಮೊರೆ ಹೋಗಿದ್ದವು. ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಬೋಸ್‌ಬರ್ಗ್ ಅವರು ಟ್ರಂಪ್ ಆದೇಶಕ್ಕೆ 14 ದಿನಗಳ ತಡೆ ನೀಡಿದ್ದಾರೆ.
‘ವಿಮಾನ ಮೂಲಕ ಜನರನ್ನು ಗಡೀಪಾರು ಮಾಡಲಾಗುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸಬೇಕು. ಯಾವುದಾದರೂ ವಿಮಾನ ಹಾರಾಟ ನಡೆಸುತ್ತಿದ್ದರೆ ತಕ್ಷಣವೇ ಅಮೆರಿಕಕ್ಕೆ ಮರಳಬೇಕು’ ಎಂದು ಅವರು ಆದೇಶಿಸಿದ್ದಾರೆ.
ಗಡೀಪಾರು ಆಗುವ ಬಹುಪಾಲು ಜನರನ್ನು ಇತರ ದೇಶಗಳ ಜೈಲುಗಳಿಗೆ ಕಳುಹಿಸಲಾಗುವುದು ಅಥವಾ ವೆನೆಜುವೆಲಾಗೆ ವಾಪಸ್ ಕಳುಹಿಸಲಾಗುತ್ತದೆ. ಅಲ್ಲಿ ಅವರು ಇದಕ್ಕಿಂತ ಕೆಟ್ಟ ಕಿರುಕುಳ ಎದುರಿಸಬೇಕಾಗುತ್ತದೆ ಎಂದು ತೀರ್ಪಿನ ವೇಳೆ ನ್ಯಾಯಧೀಶರು ನುಡಿದಿದ್ದಾರೆ.
ಟ್ರೆನ್ ಡಿ ಅರಾಗುವಾ ಗ್ಯಾಂಗ್ ವೆನೆಜುವೆಲಾದ ಸರ್ವಾಧಿಕಾರಿ ಮಡುರೊ ಆಡಳಿತದ ರಹಸ್ಯ ನಿರ್ದೇಶನದ ಮೇರೆಗೆ ಅಮೆರಿಕ ವಿರುದ್ಧ ಅನಿಯಮಿತ ಯುದ್ಧ ನಡೆಸುತ್ತಿದೆ ಎಂದು ಆದೇಶಕ್ಕೆ ಸಹಿ ಹಾಕುವೆ ವೇಳೆ ಟ್ರಂಪ್ ಹೇಳಿದ್ದರು.
ಸರ್ಕಾರವು ವಲಸಿಗರನ್ನು ಅಪಾಯಕಾರಿ ಅಪರಾಧಿಗಳು ಎನ್ನುವ ಸುಳ್ಳು ಹಣೆಪಟ್ಟಿ ಕಟ್ಟಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸುವ ಹಕ್ಕನ್ನೂ ಅವರು ಕಳೆದುಕೊಂಡಿದ್ದಾರೆ ಎಂದು ಮೊಕದ್ದಮೆ ಹೂಡಿದ್ದ ನಾಗರಿಕ ಸಂಘಟನೆಗಳು ಹೇಳಿವೆ.
(ವಿವಿಧ ಏಜೆನ್ಸಿಗಳನ್ನು ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.