ADVERTISEMENT

ಪಾಕ್‌ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಖಾಜಿ ಫಯೆಜ್‌ ಇಸಾ ಪ್ರಮಾಣ 

ಪಿಟಿಐ
Published 17 ಸೆಪ್ಟೆಂಬರ್ 2023, 11:11 IST
Last Updated 17 ಸೆಪ್ಟೆಂಬರ್ 2023, 11:11 IST
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಖಾಜಿ ಫೈಜ್‌ ಇಸಾ ಭಾನುವಾರ ಪ್ರಮಾಣ ಸ್ವೀಕರಿಸಿದರು- 'ಎಕ್ಸ್‌’ ಚಿತ್ರ
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಖಾಜಿ ಫೈಜ್‌ ಇಸಾ ಭಾನುವಾರ ಪ್ರಮಾಣ ಸ್ವೀಕರಿಸಿದರು- 'ಎಕ್ಸ್‌’ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ 29ನೇ ಮುಖ್ಯ ನ್ಯಾಯಮೂರ್ತಿಯಾಗಿ ಖಾಜಿ ಫೈಜ್‌ ಇಸಾ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.  

ಇಸ್ಲಾಮಾಬಾದ್‌ನ ಐವಾನ್-ಎ-ಸದರ್‌ನಲ್ಲಿ ನಡೆದ ಸಮಾರಂಭದಲ್ಲಿ ಹಂಗಾಮಿ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 63 ವರ್ಷದ ಮುಖ್ಯ ನ್ಯಾಯಮೂರ್ತಿ ಇಸಾ ಅವರಿಗೆ ಅಧ್ಯಕ್ಷ ಆರಿಫ್ ಅಲ್ವಿ ಅವರು ಪ್ರಮಾಣ ವಚನ ಬೋಧಿಸಿದರು.

ಖಾಜಿ ಅವರು ಪ್ರಮಾಣ ಸ್ವೀಕರಿಸುವಾಗ ಅವರ ಪತ್ನಿ ಸರೀನಾ ಇಸಾ ಕೂಡ ಉಪಸ್ಥಿತರಿದ್ದರು. 

ADVERTISEMENT

ಅವರು 13 ತಿಂಗಳುಗಳ ಸೇವಾ ಅವಧಿ ಹೊಂದಿದ್ದು, 2024ರ ಅಕ್ಟೋಬರ್ 25 ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ 56 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಸವಾಲು ಇಸಾ ಅವರ ಮುಂದಿದೆ. ಇದರಲ್ಲಿ ಕೆಲವು ಪ್ರಕರಣಗಳು ವರ್ಷಗಳ ಹಿಂದೆ ದಾಖಲಾಗಿದ್ದು, ಈವರೆಗೆ ವಿಚಾರಣೆಗೇ ಬಂದಿಲ್ಲ.

ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರ ನಿಕಟವರ್ತಿಯಾಗಿದ್ದ ಖಾಜಿ ಮಹಮ್ಮದ್ ಇಸಾ ಅವರ ಪುತ್ರನಾದ ಖಾಜಿ ಫೈಜ್ ಐಸಾ, ಲಂಡನ್‌ನಲ್ಲಿ ಕಾನೂನು ಪದವಿ ಪಡೆದವರು. 

1985ರಲ್ಲಿ ಬಲೂಚಿಸ್ತಾನದ ಹೈಕೋರ್ಟ್‌ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಪ್ರಾರಂಭಿಸಿದ ಇಸಾ, 1998ರಲ್ಲಿ ಸುಪ್ರೀಂ ಕೋರ್ಟ್‌ ವಕೀಲರಾದರು. 27 ವರ್ಷಗಳ ವಕೀಲ ವೃತ್ತಿಯ ನಂತರ, 2009ರಲ್ಲಿ ಬಲೂಚಿಸ್ತಾನದ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾದರು. 2014ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, 2014ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.