ADVERTISEMENT

ತೆಂಗಿನ ಕಾಯಿ ಒಡೆಯುವಂತೆ ಹೇಳಿದ್ದ ಕಮಲಾ ಹ್ಯಾರಿಸ್

ಚೆನ್ನೈನ ಹಿಂದೂ ದೇಗುಲದಲ್ಲಿ ಪೂಜೆ ನೆರವೇರಿಸಿದ್ದ ಚಿಕ್ಕಮ್ಮ ಸರಳ ಗೋಪಾಲನ್‌

ಪಿಟಿಐ
Published 17 ಆಗಸ್ಟ್ 2020, 14:07 IST
Last Updated 17 ಆಗಸ್ಟ್ 2020, 14:07 IST
ಕಮಲಾ ಹ್ಯಾರಿಸ್‌ 
ಕಮಲಾ ಹ್ಯಾರಿಸ್‌    

ನ್ಯೂಯಾರ್ಕ್‌: ಅಮೆರಿಕದ ಉಪಾಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಅವರು ತಮ್ಮ ಒಳಿತಿಗಾಗಿ ಹಿಂದೂ ದೇಗುಲದಲ್ಲಿ ತೆಂಗಿನ ಕಾಯಿ ಒಡೆಯುವಂತೆ ಚಿಕ್ಕಮ್ಮ ಸರಳಾ ಗೋಪಾಲನ್‌ಗೆ ಹೇಳಿದ್ದರಂತೆ.

ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ‘ಹೌ ಕಮಲಾ ಹ್ಯಾರಿಸಸ್‌ ಫ್ಯಾಮಿಲಿ ಇನ್‌ ಇಂಡಿಯಾ ಹೆಲ್ಪಡ್‌ ಶೇಪ್‌ ಹರ್‌ ವ್ಯಾಲ್ಯೂಸ್‌’ ಎಂಬ ಲೇಖನದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

2010ರಲ್ಲಿ ನಡೆದಿದ್ದ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್‌ ಚುನಾವಣೆಯಲ್ಲಿ ಕಮಲಾ ಸ್ಪರ್ಧಿಸಿದ್ದರು. ಈ ವೇಳೆ ಚೆನ್ನೈನಲ್ಲಿ ನೆಲೆಸಿರುವ ಚಿಕ್ಕಮ್ಮ (ತಾಯಿಯ ಸಹೋದರಿ) ಸರಳಾ ಅವರಿಗೆ ದೂರವಾಣಿ ಕರೆ ಮಾಡಿದ್ದ ಅವರು ತನಗೆ ಒಳ್ಳೆಯದಾಗಬೇಕು. ಇದಕ್ಕಾಗಿ ಬೆಸೆಂಟ್‌ ನಗರದಲ್ಲಿರುವ ಹಿಂದೂ ದೇಗುಲದಲ್ಲಿ ಪೂಜೆ ಮಾಡುವಂತೆ ಹೇಳಿದ್ದರು. ಕಮಲಾ ಅಣತಿಯಂತೆ ಸರಳಾ ಅವರು ಹಿಂದೂ ಸಂಪ್ರದಾಯದ ಪ್ರಕಾರ 101 ತೆಂಗಿನ ಕಾಯಿಗಳನ್ನು ಒಡೆದಿದ್ದರು.

ADVERTISEMENT

ಆ ಚುನಾವಣೆಯಲ್ಲಿ ಕಮಲಾ ಅವರು ಶೇಕಡ 0.8 ಮತಗಳ ಅಂತರದಿಂದ ವಿಜಯಿಯಾಗಿದ್ದರು.

‘ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ಚೆನ್ನೈನ ಬೆಸೆಂಟ್‌ ನಗರದ ಕಡಲ ತೀರದಲ್ಲಿ ತಾತನೊಂದಿಗೆ ಹೆಜ್ಜೆ ಹಾಕುತ್ತಿದ್ದೆ. ಆ ದಿನಗಳನ್ನು ಮರೆಯುವುದೇ ಇಲ್ಲ’ ಎಂದು ಕಮಲಾ ಅವರು 2018ರಲ್ಲಿ ಇಂಡೊ–ಅಮೆರಿಕನ್‌ ಸಮೂಹ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನೂ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಕಮಲಾ ಅವರ ತಾತ ಪಿ.ವಿ.ಗೋಪಾಲನ್‌ ಅವರು ಸರ್ಕಾರಿ ಸೇವೆಯಲ್ಲಿದ್ದರು. ನಿವೃತ್ತಿಯ ನಂತರ ಅವರು ನಿತ್ಯವೂ ಮುಂಜಾನೆ ಕಡಲ ತೀರಕ್ಕೆ ಹೋಗಿ ಸ್ನೇಹಿತರೊಂದಿಗೆ ವಾಯು ವಿಹಾರ ನಡೆಸುತ್ತಿದ್ದರು. ಆಗ ಕಮಲಾ ಕೂಡ ಅವರ ಜೊತೆಗಿರುತ್ತಿದ್ದರು.

‘ಬಾಲ್ಯದಲ್ಲಿ ಮನೆಯವರು ಕಥೆ ಹೇಳುತ್ತಿದ್ದ ದಿನಗಳನ್ನು ನಾನು ಇಂದಿಗೂ ಮೆಲುಕು ಹಾಕುತ್ತಿರುತ್ತೇನೆ. ಅವರು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದರು. ಅದು ನನ್ನ ಮೇಲೆ ಗಾಢವಾಗಿ ಪ್ರಭಾವ ಬೀರಿದೆ. ಅವು ನನ್ನ ಬದುಕನ್ನು ರೂಪಿಸಿವೆ’ ಎಂದೂ ಕಮಲಾ ಹಿಂದೊಮ್ಮೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.