ಇಸ್ಲಾಮಾಬಾದ್: ಕಾಶ್ಮೀರ ಕುರಿತಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದವನ್ನು ವಿಶ್ವಸಂಸ್ಥೆಯ ನಿರ್ಣಯದಂತೆ ಬಗೆಹರಿಸಬೇಕು ಎಂದು ಚೀನಾ ಹೇಳಿದೆ.
ಎರಡು ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ಪಾಕಿಸ್ತಾನಕ್ಕೆ ಆಗಮಿಸಿದ ಚೀನಾದ ವಿದೇಶಾಂಗ ಸಚಿವ, ಕಿನ್ ಗಾಂಗ್, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಜೊತೆ ಸಭೆ ನಡೆಸಿದರು. ಪಾಕಿಸ್ತಾನ–ಚೀನಾದ ಕಾರ್ಯತಂತ್ರದ 4ನೇ ಸುತ್ತಿನ ಮಾತುಕತೆ ಬಳಿಕ ಉಭಯ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರಾಜಕೀಯ, ಕಾರ್ಯತಂತ್ರ, ಆರ್ಥಿಕತೆ, ರಕ್ಷಣಾ ವಲಯ, ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಸಂಪೂರ್ಣ ದ್ವಿಪಕ್ಷೀಯ ಸಂಬಂಧ ಮತ್ತು ಸಹಕಾರ ಹಾಗೂ ಉಭಯ ದೇಶಗಳ ಹಿತದೃಷ್ಟಿಯಿಂದ ಪ್ರಾದೇಶಿಕ, ಜಾಗತಿಕ ವಿಷಯಗಳ ಕುರಿತಂತೆಯೂ ಚರ್ಚೆ ನಡೆಯಿತು ಎಂದು ಹೇಳಿಕೆ ತಿಳಿಸಿದೆ.
ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಳಿಸುವುದು ಹಾಗೂ ಎಲ್ಲ ಪ್ರಮುಖ ವಿವಾದಗಳ ಕುರಿತಂತೆ ನಿರ್ಣಯ ಕೈಗೊಳ್ಳುವುದರ ಪ್ರಾಮುಖ್ಯತೆಯನ್ನು ಹೇಳಿಕೆಯಲ್ಲಿ ಒತ್ತಿ ಹೇಳಲಾಗಿದೆ.
‘ಇತಿಹಾಸದಲ್ಲಿ ಉಳಿದುಹೋಗಿರುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದದ ಕುರಿತಂತೆ ವಿಶ್ವಸಂಸ್ಥೆಯ ಚಾರ್ಟರ್, ಸಂಬಂಧಪಟ್ಟ ಭದ್ರತಾ ಮಂಡಳಿ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಆಧಾರದ ಮೇಲೆ ಶಾಂತಿಯುತವಾಗಿ ಬಗೆಹರಿಸಬೇಕು’ಎಂದು ಚೀನಾ ಹೇಳಿದೆ.
'ಈಗಾಗಲೇ ಇರುವ ಅಸ್ಥಿರ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಎರಡೂ ಕಡೆಯವರು ವಿರೋಧಿಸಿದರು’ಎಂದು ಹೇಳಿಕೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅನಗತ್ಯ ಉಲ್ಲೇಖಗಳಿಗಾಗಿಈ ಹಿಂದೆ ಚೀನಾ ಮತ್ತು ಪಾಕಿಸ್ತಾನವನ್ನು ಭಾರತ ಟೀಕಿಸಿತ್ತು.
‘ನಾವು ಅಂತಹ ಹೇಳಿಕೆಗಳನ್ನು ಸತತವಾಗಿ ತಿರಸ್ಕರಿಸಿದ್ದೇವೆ ಮತ್ತು ಸಂಬಂಧಪಟ್ಟ ಎಲ್ಲಾದೇಶಗಳು ಈ ವಿಷಯಗಳ ಬಗ್ಗೆ ನಮ್ಮ ಸ್ಪಷ್ಟ ನಿಲುವನ್ನು ಚೆನ್ನಾಗಿ ತಿಳಿದಿವೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು, ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ’ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಳೆದ ವರ್ಷ ಸ್ಪಷ್ಟಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.