ADVERTISEMENT

ಕಾಶ್ಮೀರ ಪಾಕಿಸ್ತಾನದ ಜೀವನಾಡಿ: ಇಮ್ರಾನ್

ರಕ್ಷಣಾ ಮತ್ತು ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 20:00 IST
Last Updated 6 ಸೆಪ್ಟೆಂಬರ್ 2019, 20:00 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌ (ಪಿಟಿಐ): ‘ಪಾಕಿಸ್ತಾನದ ಪಾಲಿಗೆ ಕಾಶ್ಮೀರ ಜೀವನಾಡಿ ಇದ್ದಂತೆ. ಅದಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಭಾರತದ ಕ್ರಮ ದೇಶದ ಭದ್ರತೆ ಹಾಗೂ ಒಗ್ಗಟ್ಟಿಗೆ ಸವಾಲೊಡ್ಡುತ್ತದೆ’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಶುಕ್ರವಾರ ಹೇಳಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದರಕ್ಷಣಾ ಮತ್ತು ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡಿರುವ ಕ್ರಮದ ಬಗ್ಗೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದರು.

ಭಾರತದೊಂದಿಗೆ 1965ರಲ್ಲಿ ನಡೆದ ಯುದ್ಧದ ವಾರ್ಷಿಕೋತ್ಸವ ಅಂಗವಾಗಿ ಪಾಕಿಸ್ತಾನ ಸೆಪ್ಟೆಂಬರ್‌ 6ರಂದು ರಕ್ಷಣಾ ಮತ್ತು ಹುತಾತ್ಮರ ದಿನ ಆಚರಿಸುತ್ತದೆ.

ADVERTISEMENT

‘ಪ್ರಮುಖ ದೇಶಗಳ ರಾಜಧಾನಿಗಳಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ವಿಶ್ವಸಮುದಾಯಕ್ಕೆ ನಮ್ಮ ನಿಲುವನ್ನು ತಿಳಿಸಲಾಗುತ್ತಿದೆ’ ಎಂದೂ ಅವರು ಹೇಳಿದರು.

‘ಭಾರತ ಹೊಂದಿರುವ ಅಣ್ವಸ್ತ್ರ ಕುರಿತೂ ವಿಶ್ವ ಸಮುದಾಯದ ಗಮನ ಸೆಳೆದಿರುವೆ. ಇದೊಂದು ಗಂಭೀರ ವಿಷಯ. ಇದರಿಂದ ಕೇವಲ ದಕ್ಷಿಣ ಏಷ್ಯಾಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಅಪಾಯ ತಪ್ಪಿದ್ದಲ್ಲ ಎಂಬ ಅಂಶವನ್ನು ಹೇಳಿದ್ದೇನೆ’ ಎಂದರು.

‘ಅಣ್ವಸ್ತ್ರ ಹೊಂದಿರುವ ಭಾರತದ ನಡೆ ಬಗ್ಗೆ ಗಮನ ನೀಡಬೇಕು. ಅಣ್ವಸ್ತ್ರ ಬಳಸಿ ವಿಧ್ವಂಸಕ ಕೃತ್ಯ ನಡೆಸಿದ್ದೇ ಆದಲ್ಲಿ, ಅದರಿಂದಾಗುವ ಪರಿಣಾಮಗಳಿಗೆ ವಿಶ್ವ ಸಮುದಾಯವೇ ಹೊಣೆಯಾಗ
ಬೇಕಾಗುತ್ತದೆ’ ಎಂದೂ ಅವರು ಪುನರುಚ್ಚರಿಸಿದರು.

‘ವಿಶ್ವಸಂಸ್ಥೆ ನಿರ್ಣಯದಂತೆ ಸಮಸ್ಯೆ ಇತ್ಯರ್ಥ’

ರಾವಲ್ಪಿಂಡಿಯಲ್ಲಿರುವ ಸೇನೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ, ‘ಕಾಶ್ಮೀರ ಪಾಕಿಸ್ತಾನದ ಭಾಗವಾಗಬೇಕು. ಆಗ ಮಾತ್ರ ಪ್ರತ್ಯೇಕ ರಾಷ್ಟ್ರವಾಗಿ ಪಾಕಿಸ್ತಾನದ ರಚನೆ ಸಂಪೂರ್ಣವಾದಂತೆ. ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳ ಅನ್ವಯವೇ ಬಗೆಹರಿಸಬೇಕು. ಇದು ನಮ್ಮ ಸ್ಪಷ್ಟ ನಿಲುವು’ ಎಂದು ಹೇಳಿದರು.

‘ಪಾಕ್ ಜೊತೆ ಮಾತುಕತೆಗೆ ಭಾರತ ಸಿದ್ಧ’

‘ಭಯೋತ್ಪಾದನೆ ಕುರಿತು ಪಾಕಿಸ್ತಾನದ ಜತೆ ಚರ್ಚಿಸಲು ಭಾರತ ಸಿದ್ಧವಿದೆ. ಆದರೆ ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಶುಕ್ರವಾರ ಹೇಳಿದ್ದಾರೆ.

ಸೆ. 6ರಿಂದ 10ರವರೆಗೆ ಸಿಂಗಪುರ ಪ್ರವಾಸದಲ್ಲಿರುವ ಜೈಶಂಕರ್ ಮಿಂಟ್ ಏಷ್ಯಾ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದರು.

‘ಮಾತುಕತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುತ್ತದೆ. ಆದರೆ, ಇದಕ್ಕೆ ಯಾವುದೇ ಒತ್ತಡ ಅಥವಾ ಅಡ್ಡಿ– ಆತಂಕಗಳು ಇರಬಾರದು. ಪಾಕ್‌ ನೆರೆಹೊರೆಯ ನಾಗರಿಕನಂತೆ ಇದ್ದಲ್ಲಿ ಮಾತ್ರ ಪರಸ್ಪರ ಮುಕ್ತವಾಗಿ ಮಾತುಕತೆ ನಡೆಸಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.