ADVERTISEMENT

ಖಶೋಗ್ಗಿ ಹತ್ಯೆ, ಸೌದಿಯಲ್ಲೇ ಆರೋಪಿಗಳ ವಿಚಾರಣೆ: ವಿದೇಶಾಂಗ ಸಚಿವ ಹೇಳಿಕೆ

ಏಜೆನ್ಸೀಸ್
Published 27 ಅಕ್ಟೋಬರ್ 2018, 17:26 IST
Last Updated 27 ಅಕ್ಟೋಬರ್ 2018, 17:26 IST
ಅಡೆಲ್‌ ಅಲ್‌ ಜುಬೈರ್‌
ಅಡೆಲ್‌ ಅಲ್‌ ಜುಬೈರ್‌   

ಮನಾಮಾ, ಬಹರೇನ್‌: ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳ ವಿಚಾರಣೆಯನ್ನು ಸೌದಿ ಅರೇಬಿಯಾದಲ್ಲೇ ನಡೆಸಲಾಗುವುದು ಎಂದು ಸೌದಿಯ ವಿದೇಶಾಂಗ ಸಚಿವ ಅಡೆಲ್‌ ಅಲ್‌ ಜುಬೈರ್‌ ಶನಿವಾರ ಹೇಳಿದ್ದಾರೆ.

ಇಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಅವರು,‘ಆರೋಪಿಗಳು ಸೌದಿ ಅರೇಬಿಯಾ ಪ್ರಜೆಗಳು, ಅವರನ್ನು ಅಲ್ಲಿಂದಲೇ ಬಂಧಿಸಲಾಗಿದೆ’ ಎಂದಿದ್ದಾರೆ.

ಖಶೋಗ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 18 ಮಂದಿ ಸೌದಿ ಪ್ರಜೆಗಳನ್ನು ಟರ್ಕಿಗೆ ಹಸ್ತಾಂತರಿಸಬೇಕು ಎಂದು ಅಲ್ಲಿನ ಅಧ್ಯಕ್ಷ ತಯೀಪ್‌ ಎರ್ಡೋಗನ್‌ ಆಗ್ರಹಿಸಿದ ಮರುದಿನ ಅಡೆಲ್‌ ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಖಶೋಗ್ಗಿ ಹತ್ಯೆ ಪೂರ್ವನಿಯೋಜಿತ ಎಂದು ಒಪ್ಪಿಕೊಂಡಿರುವ ಸೌದಿ ಅರೇಬಿಯಾ, ಹತ್ಯೆಯಲ್ಲಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಕೈವಾಡ ಇದೆ ಎಂಬ ಆರೋಪವನ್ನು ತಳ್ಳಿಹಾಕಿದೆ.

ಕಳವಳ ವಿಚಾರ: ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್ ಕಚೇರಿಯೊಳಗೆ ಪತ್ರಕರ್ತ ಖಶೋಗ್ಗಿ ಹತ್ಯೆ ನಡೆದಿರುವುದು ಎಲ್ಲರೂ ಕಳವಳ ಪಡುವ ವಿಚಾರ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ.

ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಖಶೋಗ್ಗಿ ಅವರ ನಿರ್ದಯ ಹತ್ಯೆಯನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.