ADVERTISEMENT

ಉಗ್ರರಿಂದ ಅಪಹರಣಕ್ಕೀಡಾಗಿದ್ದ ನೈಜೀರಿಯಾದ ಶಾಲಾ ಬಾಲಕಿ 7 ವರ್ಷಗಳ ನಂತರ ಬಿಡುಗಡೆ

ಏಜೆನ್ಸೀಸ್
Published 8 ಆಗಸ್ಟ್ 2021, 15:18 IST
Last Updated 8 ಆಗಸ್ಟ್ 2021, 15:18 IST
ಅಪಹರಣಕ್ಕೀಡಾದ ತಮ್ಮ ಮಕ್ಕಳನ್ನು ಕರೆ ತರುವಂತೆ ಆಗ್ರಹಿಸಿ 2014ರಲ್ಲಿ ಪೋಷಕರು ನಡೆಸಿದ್ದ ಪ್ರತಿಭಟನೆ
ಅಪಹರಣಕ್ಕೀಡಾದ ತಮ್ಮ ಮಕ್ಕಳನ್ನು ಕರೆ ತರುವಂತೆ ಆಗ್ರಹಿಸಿ 2014ರಲ್ಲಿ ಪೋಷಕರು ನಡೆಸಿದ್ದ ಪ್ರತಿಭಟನೆ    

ಲಾಗೋಸ್‌ (ನೈಜೀರಿಯಾ): 2014 ರಲ್ಲಿ ಬೊಕೊ ಹರಾಮ್‌ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ನೈಜೀರಿಯಾದ ಚಿಬೋಕ್‌ನ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಉಗ್ರರು 7 ವರ್ಷಗಳ ನಂತರ ಬಿಡುಗಡೆ ಮಾಡಿದ್ದಾರೆ ಎಂದು ಬೊರ್ನೊ ರಾಜ್ಯದ ಗವರ್ನರ್‌ ತಿಳಿಸಿದ್ದಾರೆ.

ಬಾಲಕಿಯನ್ನು ಆಕೆಯ ತಂದೆ ತಾಯಿಗೆ ಒಪ್ಪಿಸಲಾಗಿದೆ. ಆಕೆಗೆ ಸರ್ಕಾರಿ ಪುನವರ್ವಸತಿ ಕೇಂದ್ರದಲ್ಲಿ ಮಾನಸಿಕ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ ಎಂದು ಗವರ್ನರ್‌ ಬಬಗನ ಜುಲುಮ್‌ ತಿಳಿಸಿದ್ದಾರೆ.

ರೂತ್ ಎನ್‌ಗ್ಲಾದಾರ್ ಪೋಗು ಕಳೆದ ತಿಂಗಳು ತಾನು ವರಿಸಿರುವುದಾಗಿ ಹೇಳಿಕೊಂಡ ವ್ಯಕ್ತಿಯೊಂದಿಗೆ ಸೇನೆಗೆ ಶರಣಾಗಿದ್ದಾಳೆ ಎಂದು ಗವರ್ನರ್‌ ಮಾಹಿತಿ ನೀಡಿದ್ದಾರೆ. ಜುಲೈ 28ರಂದೇ ಆಕೆ ಸರ್ಕಾರದ ಸಂಪರ್ಕಕ್ಕೆ ಬಂದಿದ್ದಾಳಾದರೂ, ಸರ್ಕಾರ ತಡವಾಗಿ ವಿಚಾರವನ್ನು ಬಹಿರಂಗಪಡಿಸಿದೆ.

12 ರಿಂದ 17 ವರ್ಷದೊಳಗಿನ ಸುಮಾರು 300 ಶಾಲಾ ಬಾಲಕಿಯರನ್ನು 2014ರ ಏಪ್ರಿಲ್‌ನಲ್ಲಿ ಈಶಾನ್ಯ ನೈಜೀರಿಯಾದ ಚಿಬೋಕ್‌ನಿಂದ ಬೊಕೊ ಹರಮ್ ಉಗ್ರರು ಅಪಹರಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. #BringBackOurGirls ಎಂಬ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ಸಾಮಾಜಿಕ ತಾಣಗಳಲ್ಲಿ ಚಳವಳಿ ನಡೆದಿತ್ತು.

ADVERTISEMENT

ಘಟನೆ ನಡೆದ ನಂತರದ ವರ್ಷಗಳಲ್ಲಿ, ಅನೇಕ ಬಾಲಕಿಯರು ಬಿಡುಗಡೆಯಾಗಿದ್ದಾರೆ. ಅಥವಾ, ಸೇನೆಯು ಅವರನ್ನು ಪತ್ತೆ ಮಾಡಿ, ಬಿಡಿಸಿಕೊಂಡು ಬಂದಿದೆ. ಆದರೂ 100ಕ್ಕಿಂತಲೂ ಹೆಚ್ಚಿನ ಹೆಣ್ಣು ಮಕ್ಕಳು ಇನ್ನೂ ಪತ್ತೆಯಾಗಿಲ್ಲ ಎಂದು ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಸಂಸ್ಥೆ ಏಪ್ರಿಲ್‌ನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.