ADVERTISEMENT

ಭಾರತೀಯ ಸೇನೆಯನ್ನು ಪ್ರಚೋದಿಸುತ್ತಿರುವ ಚೀನಾ: ಅಮೆರಿಕ ಮಾಧ್ಯಮಗಳು

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 5:01 IST
Last Updated 17 ಜೂನ್ 2020, 5:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಚೀನಾ ಸೇನೆಯು 20 ಭಾರತೀಯ ಯೋಧರನ್ನು ಹತ್ಯೆ ಮಾಡುವ ಮೂಲಕ ಭಾರತೀಯ ಸೇನೆಯನ್ನು ಪ್ರಚೋದಿಸಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಗಾಲ್ವನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಇದು ಚೀನಾ ಸೇನೆಯ ಏಕಪಕ್ಷಿಯ ದಾಳಿ ಎಂದು ವಾಷಿಂಗ್ಟನ್‌ ಎಗ್ಸಾಮಿನರ್‌ನಲ್ಲಿ ಪತ್ರಕರ್ತ ಟಾಮ್‌ ರೋಗ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಂಕಷ್ಟದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಿಂದ ಮತ್ತೊಂದು ಸವಾಲನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕಳೆದು ಎರಡು ಮೂರು ತಿಂಗಳಿಂದ ಚೀನಾ ಸೇನೆ ಭಾರತೀಯ ಗಡಿಯಲ್ಲಿ ಅಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಭಾರತೀಯ ಸೇನೆಯನ್ನು ಪ್ರಚೋದಿಸುತ್ತಿದ್ದು ಅಮೆರಿಕ ಭಾರತದ ಪರವಾಗಿ ನಿಲ್ಲಬೇಕು ಎಂದು ಟಾಮ್‌ ರೋಗ್‌ ಹೇಳಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ಪಾಕ್ ವಿರುದ್ಧ ಮೋದಿ ತೆಗೆದುಕೊಂಡ ನಿರ್ಧಾರಗಳಿಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಚೀನಾ ವಿರುದ್ಧ ಮೋದಿ ಯಾವ ನಿಲುವು ತಳೆಯಬಹುದು ಎಂಬುದು ಕುತೂಹಲ ಮೂಡಿಸಿದೆ ಎಂದು ನ್ಯೂಯಾರ್ಕ್‌ ಟೈಮ್ಸ್ ಹೇಳಿದೆ.

ಕೊರೊನಾ ಸಂಕಷ್ಟದಿಂದಾಗಿ ಭಾರತದ ಆರ್ಥಿಕತೆ ತೀವ್ರವಾಗಿ ಕುಸಿದಿದ್ದು, ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಕಠಿಣ ನಿರ್ಧಾರ ತೆಗೆದು ಕೊಳ್ಳುವುದಿಲ್ಲ ಎಂದು ವಾಷಿಂಗ್ಟನ್‌ ಪೋಸ್ಟ್ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.