ಸ್ಕಾಕ್‌ಹೋಮ್: ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೊರ್ಕೈ ಅವರಿಗೆ ಈ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ.
ಅವರು ಸರಳ ವಾಕ್ಯಗಳ ಮೂಲಕ, ತಮಾಷೆಯ ವಿವರಣೆಯೊಂದಿಗೆ ತತ್ವಜ್ಞಾನವನ್ನು ಹೇಳುವ ವಿಶಿಷ್ಟ ಕಾದಂಬರಿ ರಚನೆಯ ಮೂಲಕ ಗಮನಸೆಳೆದಿದ್ದಾರೆ. ಅರ್ನೆಸ್ಟ್ ಹೆಮ್ಮಿಂಗ್‌ವೆ, ಅಲ್ಬರ್ಟ್ ಕ್ಯಾಮಸ್ ಹಾಗೂ ಟೊನಿ ಮಾರಿಸ್ಸನ್ ಅವರ ಸಾಹಿತ್ಯಿಕ ಶ್ರೇಷ್ಠ ಕೃತಿಗಳ ಹೆಜ್ಜೆ ಗುರುತುಗಳನ್ನು ಅನುಕರಿಸುವ ಮೂಲಕ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸ್ವೀಡಿಶ್ ಅಕಾಡೆಮಿ ನೊಬೆಲ್ ಸಮಿತಿಯು ಸಾಹಿತ್ಯ ಪ್ರಶಸ್ತಿಯನ್ನು 117 ಬಾರಿ ಒಟ್ಟು 121 ಮಂದಿಗೆ ನೀಡಿದೆ. ಕಳೆದ ವರ್ಷ ದಕ್ಷಿಣ ಕೊರಿಯಾದ ಲೇಖಕ ಹಾನ್ ಕಂಗ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸಂದಿತ್ತು.
2025ರ ನೊಬೆಲ್ ಪ್ರಶಸ್ತಿ ವಿಭಾಗದಲ್ಲಿ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಭಾಗದಲ್ಲಿ ಈಗಾಗಲೇ ಘೋಷಿಸಲಾಗಿದೆ. ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಗುತ್ತದೆ.
ಅಲ್ಫ್ರೆಡ್ ನೊಬೆಲ್ ಅವರ ನಿಧನ ಹೊಂದಿದ ದಿನವಾದ ಡಿಸೆಂಬರ್ 10ರಂದು ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 11 ಸ್ವೀಡಿಶ್ ಕ್ರೊನೊರ್ (₹10.66 ಕೋಟಿ ನಗದು) ಹಾಗೂ 18 ಕ್ಯಾರೆಟ್ ಚಿನ್ನದ ಪದಕ, ಪ್ರಮಾಣಪತ್ರ ಹೊಂದಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.