ಮಾಸ್ಕೊ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಿಮಾನವೊಂದು ತುರ್ತಾಗಿ ಇಳಿಯುತ್ತಿದ್ದಾಗ ಬೆಂಕಿಗೆ ಆಹುತಿಯಾಗಿದೆ.
ಈ ಅವಘಡದಲ್ಲಿ ಇಬ್ಬರು ಮಕ್ಕಳೂ ಸೇರಿ ಕನಿಷ್ಠ 41 ಜನರು ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿದ್ದಾರೆ. ರಷ್ಯಾ ನಿರ್ಮಿತ ‘ಸುಖೊಯ್ ಸೂಪರ್ ಜೆಟ್–100’ ವಿಮಾನ ಷೆರೆಮೆಟ್ಯೆವೊ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಿಬ್ಬಂದಿ ಅಪಾಯದ ಸಂದೇಶ ನೀಡಿದರು.
ಮೊದಲ ಬಾರಿ ತುರ್ತು ಭೂಸ್ಪರ್ಶ ಮಾಡುವ ಪ್ರಯತ್ನ ವಿಫಲವಾಯಿತು. ಎರಡನೇ ಬಾರಿ ಭೂಸ್ಪರ್ಶ ಮಾಡಿದಾಗ ಬೆಂಕಿ ತಗುಲಿತು.
ರಷ್ಯಾದ ಮುರ್ಮನ್ಸ್ಕ್ ನಗರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಸಿಬ್ಬಂದಿಯೂ ಸೇರಿ 78 ಜನ ಇದ್ದರು. ಈ ಪೈಕಿ 37 ಮಂದಿ ಅಪಾಯದಿಂದ ಪಾರಾಗಿದ್ದಾರೆ. 11 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ. ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರು ವಿಶೇಷ ಸಮಿತಿ ರಚಿಸಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.