ADVERTISEMENT

ಲಾಕ್‌ಡೌನ್ ಸಡಿಲಿಕೆ: ವಿಶ್ವದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಮೇ 2020, 12:12 IST
Last Updated 10 ಮೇ 2020, 12:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್ (ಎಎಫ್‌ಪಿ): ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದುವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾನುವಾರ ಲಾಕ್ ಡೌನ್ ಸಡಿಲಿಸಿದ್ದರಿಂದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ40 ಲಕ್ಷಕ್ಕೆ ತಲುಪಿದೆ. ಸಾವಿನ ಸಂಖ್ಯೆ ವಿಶ್ವದಾದ್ಯಂತ 2.77 ಲಕ್ಷಕ್ಕೆ ತಲುಪಿದೆ.

ಫ್ರಾನ್ಸ್, ಸ್ಪೇನ್‌‌‌ನಂತಹ ರಾಷ್ಟ್ರಗಳಲ್ಲಿ ಭಾನುವಾರ ಲಾಕ್‌ಡೌನ್ ಸಡಿಲಿಸಿದ್ದು ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ.ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರಗಳುಒಂದುಕಡೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದರ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಮತ್ತೊಂದು ಕಡೆ ಲಾಕ್‌ಡೌನ್ ಸಡಿಲಗೊಳಿಸುತ್ತಿವೆ. ಅಲ್ಲದೆ, ಆರ್ಥಿಕ ಪರಿಸ್ಥಿತಿಸುಧಾರಿಸುವತ್ತಲೂ ಗಮನಹರಿಸುತ್ತಿವೆ.

ವಿಶ್ವದ ಎಲ್ಲಾ ರಾಷ್ಟ್ರಗಳು ಈ ಸಂದಿಗ್ಧಪರಿಸ್ಥಿತಿಗೆ ಸಿಲುಕಿವೆ. ಈ ನಡುವೆಕೊರೊನಾ ಸೋಂಕು ಪ್ರಕರಣಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎನ್ನಲಾಗಿದೆ.ಅಮೆರಿಕಾದಲ್ಲಿ ಕೊರೊನಾ ಸೋಂಕು ವೈಟ್ ಹೌಸ್‌ವರೆಗೂ ತಲುಪಿದ್ದು, ಭಾನುವಾರ ಅಲ್ಲಿನ ಸಿಬ್ಬಂದಿಯನ್ನು ಆತಂಕಕ್ಕೆ ಈಡುಮಾಡಿತ್ತು.

ADVERTISEMENT

ಅಮೆರಿಕಾದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಆಂಥೋನಿ ಫೌಸಿ ಶ್ವೇತಭವನದ ಕರೋನವೈರಸ್ ಕಾರ್ಯಪಡೆಯ ಮೂವರು ಸದಸ್ಯರಲ್ಲಿ ಒಬ್ಬರಾಗಿದ್ದು, ಶನಿವಾರ ಇವರು ಸ್ವಯಂ ಪ್ರತ್ಯೇಕವಾಗಿದ್ದಾರೆಎಂದು ವೈಟ್ ಹೌಸ್ ವರದಿ ತಿಳಿಸಿದೆ.

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಸೋಂಕು ತಗುಲಿದ ವ್ಯಕ್ತಿಯೊಬ್ಬ ಶನಿವಾರ ರಾತ್ರಿ ನಗರದ ಅತ್ಯಂತ ಜನಸಂದಣಿ ಪ್ರದೇಶಗಳಲ್ಲಿ ಓಡಾಡಿದ್ದ. ಈತನನ್ನುಪರೀಕ್ಷಿಸಿದ ನಂತರ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈತ ಭೇಟಿ ಮಾಡಿ ಹೋಗಿದ್ದ50 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಆರೋಗ್ಯಾಧಿಕಾರಿಗಳ ಎಚ್ಚರಿಕೆ ನಂತರ ಸಿಯೋಲ್‌ನಎಲ್ಲಾ ಬಾರ್ ಮತ್ತು ಕ್ಲಬ್‌ಗಳನ್ನುಬಂದ್ ಮಾಡಲಾಗಿದೆ.

ಫ್ರಾನ್ಸ್‌ನಲ್ಲಿ ಎಂಟು ವಾರಗಳ ಹಿಂದೆ ವಿಧಿಸಲಾಗಿರುವ ಲಾಕ್‌ಡೌನ್ ಸೋಮವಾರದಿಂದ ಸಡಿಲ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ಎರಡನೆ ಹಂತದ ಕೊರೊನಾ ಸೋಂಕುತಡೆಗೆ ಜನರು ಸಿದ್ಧರಾಗಬೇಕು ಹಾಗೂ ಜವಾಬ್ದಾರಿಯಿಂದ ನಡೆದುಕೊಂಡು ಅಂತರ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ, ಸೋಮವಾರದಿಂದ ಲಾಕ್‌ಡೌನ್ ಸಡಿಲಗೊಳ್ಳುತ್ತಿರುವುದಕ್ಕೆಇಲ್ಲಿನ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸ್ಪೇನ್‌ನಲ್ಲಿಅರ್ಧದಷ್ಟು ಜನರಿಗೆ ಹೊರಗೆ ಬರಲು ಸೋಮವಾರ ಸ್ಥಳೀಯಆಡಳಿತ ಅನುಮತಿ ನೀಡಿದೆ. ಅಲ್ಲದೆ, ಇಲ್ಲಿರುವ ರೆಸ್ಟೊರೆಂಟ್ ಗಳಲ್ಲಿ ಹೊರಾಂಗಣ ಸೇವೆಯನ್ನು ನೀಡಬಹುದು ಎಂದು ತಿಳಿಸಿದೆ.

ಬೆಲ್ಜಿಯಂನಲ್ಲಿಯೂ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ. ಜರ್ಮನಿಯ ಕೆಲ ಪ್ರದೇಶಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು ಶನಿವಾರದಿಂದ ಪ್ರಾರಂಭವಾಗಿವೆ.ಬ್ರಿಟನ್ ನಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್ ಕೂಡ ಸೋಮವಾರ ಲಾಕ್‌‌ಡೌನ್ ಸಡಿಲಿಸುವ ನಿರೀಕ್ಷೆ ಇದೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಹೊರ ದೇಶಗಳಿಂದ ಬ್ರಿಟನ್ ಪ್ರವೇಶಿಸುವ ಎಲ್ಲಾ ಜನರನ್ನು ದೇಶ ಪ್ರವೇಶಿಸುವ ಮೊದಲು ವಿಮಾನ ನಿಲ್ದಾಣಗಳಲ್ಲಿಯೇ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸುವುದನ್ನುಕಡ್ಡಾಯಗೊಳಿಸಬೇಕೆಂದು ತಜ್ಞರು ಒತ್ತಾಯಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವದಾದ್ಯಂತ ಸಾವಿನ ಸಂಖ್ಯೆ 2.77 ಲಕ್ಷ ತಲುಪಿದ್ದು, ಅಮೆರಿಕಾದಲ್ಲಿ ಅತ್ಯಂತ ಹೆಚ್ಚು ಸಾವು ಸಂಭವಿಸಿದೆ. ಪ್ರತಿದಿನ 1 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್ ಡೌನ್ ತೆಗೆದು ಹಾಕಬೇಕೆಂದು ಪ್ರತಿಭಟನೆ ನಡೆಯುತ್ತಿವೆ. ಅಸ್ಟ್ರೇಲಿಯಾ, ಮೆಲ್ಬೋರ್ನ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹತ್ತು ಮಂದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.