ADVERTISEMENT

ಆರ್ಥಿಕ ಚೇತರಿಕೆಗೆ ‘ಬ್ರಿಕ್ಸ್‌’ ಸಹಕಾರಿ

ಬ್ರಿಕ್ಸ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ * ಚೀನಾದ ವಾಂಗ್ ಯೀ ಅಭಿಮತ

ಪಿಟಿಐ
Published 1 ಜೂನ್ 2021, 11:31 IST
Last Updated 1 ಜೂನ್ 2021, 11:31 IST
ವಾಂಗ್ ಯೀ
ವಾಂಗ್ ಯೀ   

ಬೀಜಿಂಗ್‌ (ಪಿಟಿಐ): ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಿಗೆ ಏಕರೂಪವಾಗಿ ಸಂಬಂಧಿತ ವಿಷಯಗಳ ಕುರಿತು ಚರ್ಚೆ, ವಿಚಾರ ವಿನಿಮಯ ಮೂಲಕ ಸರ್ವಸಮ್ಮತ ಅಭಿಪ್ರಾಯ ಮೂಡಿಸುವುದನ್ನು ತಾನು ಎದುರು ನೋಡುವುದಾಗಿ ಚೀನಾ ಮಂಗಳವಾರ ಪ್ರತಿಪಾದಿಸಿದೆ.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್‌) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾದ ವಾಂಗ್ ಯೀ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿರುವ ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌, ‘ಕೋವಿಡ್ ನಂತರದಲ್ಲಿ ಆರ್ಥಿಕ ಚೇತರಿಕೆಯ ದೃಷ್ಟಿಯಿಂದ ಈ ಸಭೆ ಮಹತ್ವವಾದುದು’ ಎಂದರು.

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರು ವಿಡಿಯೊ ಲಿಂಕ್ ಮೂಲಕ ಸಭೆಯನ್ನು ಆಯೋಜಿಸಿದ್ದಾರೆ. ಜಾಗತಿಕವಾಗಿ ಪ್ರಭಾವಿಯಾಗಿರುವ ಪ್ರಮುಖ ಅಭಿವೃದ್ಧಿ ರಾಷ್ಟ್ರಗಳು ಪರಸ್ಪರ ಸಹಕಾರ ಹೊಂದುವ ಉದ್ದೇಶದಿಂದ ಬ್ರಿಕ್ಸ್‌ ಶೃಂಗವನ್ನು ರಚಿಸಿಕೊಂಡಿವೆ.

ADVERTISEMENT

‘ಕೋವಿಡ್ ಬೀರಿರುವ ಒಟ್ಟು ಪರಿಣಾಮ ಹಾಗೂ ಈ ಶತಮಾನದಲ್ಲಿ ಸಂಭವಿಸಿರುವ ಪ್ರಮುಖ ಬದಲಾವಣೆಗಳ ಹಿನ್ನೆಲೆಯಲ್ಲಿ ಬ್ರಿಕ್ಸ್‌ ವೇದಿಕೆಯು ಪರಸ್ಪರ ಸಹಕಾರ ಮೂಡಿಸುವಲ್ಲಿ ಪ್ರಮಖವಾದುದು. ಮುಖ್ಯವಾಗಿ ಕೋವಿಡ್ ನಂತರದಲ್ಲಿ ಆರ್ಥಿಕ ಚೇತರಿಕೆಗೆ ಇದು ಸಹಕಾರಿ’ ಎಂದು ತಿಳಿಸಿದರು.

ಸಭೆಯಿಂದ ಚೀನಾದ ನಿರೀಕ್ಷೆಗಳೇನು ಎಂಬ ಪ್ರಶ್ನೆಗೆ ವಕ್ತಾರರು, ‘ಪರಸ್ಪರ ಸಹಕಾರ, ಪ್ರೋತ್ಸಾಹದಿಂದ ನಾವು ದೃಢವಾಗಿದ್ದೇವೆ ಎಂಬ ಸಂದೇಶವನ್ನು ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ರವಾನಿಸಬಹುದು. ಒಟ್ಟಾರೆ, ವಿಶ್ವದ ಮುಂದಿರುವ ಸವಾಲುಗಳನ್ನು ಎದುರಿಸುವುದು ಸಾಧ್ಯ’ ಎಂದರು.

ಜೈಶಂಕರ್ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು ಸಭೆಯಲ್ಲಿ ಚೀನಾದ ವಾಂಗ್ ಅಲ್ಲದೆ ವಿದೇಶಾಂಗ ಸಚಿವರಾದ ಸೆರ್ಗೆ ಲಾವ್‌ರೊವ್ (ರಷ್ಯಾ), ಗ್ರೇಸ್ ಮಂಡಿಸಾ ಪಂಡೊರ್ (ದಕ್ಷಿಣ ಆಫ್ರಿಕಾ), ಕಾರ್ಲೊಸ್‌ ಅಲ್ಬೆರ್ಟೊ ಫ್ರಾಂಕೊ (ಬ್ರೆಜಿಲ್) ಅವರೂ ಭಾಗವಹಿಸುವರು. ಭಾರತ 2012 ಮತ್ತು 2016ರಲ್ಲಿಯೂ ಸಭೆಯ ಅಧ್ಯಕ್ಷತೆಯನ್ನು ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.