ADVERTISEMENT

ಪಾಕ್‌ ಮಹಿಳೆ ಭಾರತಕ್ಕೆ ಬಂದಿದ್ದು ಪ್ರೀತಿಗಾಗಿ

ಪಾಕಿಸ್ತಾನ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಪಾಕಿಸ್ತಾನದ ಗುಪ್ತಚರ ಇಲಾಖೆ

ಪಿಟಿಐ
Published 17 ಜುಲೈ 2023, 17:19 IST
Last Updated 17 ಜುಲೈ 2023, 17:19 IST

ಲಾಹೋರ್‌: ಪ್ರೀತಿಸಿದ ಯುವಕನ ಜೊತೆಗೆ ನೆಲೆಸುವ ಏಕೈಕ ಉದ್ದೇಶದಿಂದ ಸೀಮಾ ಹೈದರ್‌ ಪಾಕಿಸ್ತಾನ ತೊರೆದು ಭಾರತ ಪ್ರವೇಶಿಸಿದ್ದು, ಈ ಘಟನೆಯಲ್ಲಿ ‘ಪ್ರೀತಿ’ಯನ್ನು ಮೀರಿದ್ದೇನೂ ಇಲ್ಲ ಎಂದು ಪಾಕ್‌ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ವರದಿ ನೀಡಿದೆ.   

ಕರಾಚಿಯ ಸಿಂಧ್‌ ಪ್ರಾಂತ್ಯದ 30 ವರ್ಷದ ಸೀಮಾ ಗುಲಾಮ್‌ ಹೈದರ್‌ಗೆ ನಾಲ್ವರು ಮಕ್ಕಳಿದ್ದಾರೆ. ಆನ್‌ಲೈನ್‌ ಗೇಮ್‌ ಪಬ್‌ಜಿಯಲ್ಲಿ ಗ್ರೇಟರ್‌ ನೋಯ್ಡಾದ ರಬೂಪುರ ಪ್ರದೇಶದ ಕಿರಾಣಿ ಅಂಗಡಿ ಮಾಲೀಕ 22 ವರ್ಷದ ಸಚಿನ್‌ ಅವರನ್ನು ಆಕೆ 2019ರಲ್ಲಿ ಪರಿಚಯ ಮಾಡಿಕೊಂಡಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಸೀಮಾ ಹೈದರ್‌ ಪಾಕಿಸ್ತಾನ ತೊರೆದು ಭಾರತಕ್ಕೆ ಹೋಗಿದ್ದು ಪ್ರಿಯಕರ ಸಚಿನ್‌ನನ್ನು ಮದುವೆಯಾಗಲಷ್ಟೇ. ಪ್ರೀತಿಯನ್ನು ಮೀರಿ ಇನ್ನೇನೂ ಇದರಲ್ಲಿಲ್ಲ. ಈ ಕುರಿತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ’ ಎಂದು ಪಾಕಿಸ್ತಾನದ ಗುಪ್ತಚರ ಇಲಾಖೆಯ ಮೂಲಗಳ ಮಾಹಿತಿ ಉಲ್ಲೇಖಿಸಿ ಉರ್ದು ಪತ್ರಿಕೆ ‘ಜಂಗ್‌’ ಸೋಮವಾರ ವರದಿ ಪ್ರಕಟಿಸಿದೆ. 

ADVERTISEMENT

ವೀಸಾ ಇಲ್ಲದೆ ನೇಪಾಳದ ಮೂಲಕ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪದ ಮೇಲೆ ಸೀಮಾ ಅವರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಅಕ್ರಮವಾಗಿ ಆಕೆಗೆ ನೆಲೆಸಲು ಆಶ್ರಯ ನೀಡಿದ ಆರೋಪದ ಮೇಲೆ ಸಚಿನ್‌ ಅವರನ್ನೂ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಈ ಇಬ್ಬರಿಗೂ ಜಾಮೀನು ಸಿಕ್ಕಿದೆ. 

ಸೀಮಾ ಮತ್ತೆ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದಾರೆ. ‍

ಒಂದು ವೇಳೆ ಸೀಮಾ ಹಿಂದಿರುಗಿ ಬಂದರೆ ಆಕೆಯನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಸಿಂಧ್‌ ಪ್ರಾಂತ್ಯದ ಧರ್ಮಬೋಧಕ ಮಿಯಾನ್‌ ಮಿಥು ಎಂಬಾತ ಬಹಿರಂಗವಾಗಿ ಬೆದರಿಕೆಹಾಕಿದ್ದಾನೆ. ಸೀಮಾಳ ಹಳ್ಳಿಯಲ್ಲಿ ಹಿಂದೂ ಪ್ರಾರ್ಥನಾ ಮಂದಿರಗಳನ್ನು ಧ್ವಂಸಗೊಳಿಸುವುದಾಗಿ ಮಿಯಾನ್‌ ಮಿಥು ಬೆಂಬಲಿಗರು ಬೆದರಿಕೆಯೊಡ್ಡಿದ್ದಾರೆ. 

ಸಿಂಧ್‌ ಪ್ರಾಂತ್ಯದ ರಾಧಾ ಸ್ವಾಮಿ ದರ್ಬಾರ್‌ ದೇಗುಲದ ಮೇಲೆ ಭಾನುವಾರವಷ್ಟೇ ದಾಳಿ ನಡೆದಿದೆ. ಜಕೋಬಾಬಾದ್‌ನ ಹಿಂದೂ ಪಂಚಾಯತ್‌ನ ಅಧ್ಯಕ್ಷ ಲಾಲ್‌ಚಂದ್‌ ಸೀತ್ಲಾನಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. 

‌ಈ ಮಧ್ಯೆ, ಕಾಶ್ಮೋರ್‌ ಮತ್ತು ಘೋಟ್ಕಿಯಲ್ಲಿ 30 ಹಿಂದೂಗಳು ಅಪಹರಣಕ್ಕೀಡಾಗಿರುವ ಬಗ್ಗೆ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಆತಂಕ ವ್ಯಕ್ತಪಡಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.