ಬೀಜಿಂಗ್: ಚೀನಾ ಸರ್ಕಾರವು ಕೋವಿಡ್‌ನ ಕಟ್ಟುನಿಟ್ಟಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಮೂರು ವರ್ಷಗಳ ಬಳಿಕ ಅಲ್ಲಿನ ಜನರು ಜ. 22ರಂದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಸಿದ್ಧರಾಗುತ್ತಿದ್ದಾರೆ.
ಚೀನಾದಲ್ಲಿ ಪ್ರತಿವರ್ಷ ವಸಂತ ಋತುವಿನ ಸಮಯದಲ್ಲಿ ಹೊಸವರ್ಷ ಆಚರಿಸುವ ಪದ್ಧತಿಯಿದ್ದು, ಈ ವೇಳೆ ನಗರದ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಬೆರೆತು ಸಂತಸದಿಂದ ಕಾಲ ಕಳೆಯುತ್ತಾರೆ.
ಕೋವಿಡ್‌ನಿಂದಾಗಿ ಕಳೆದ ಮೂರು ವರ್ಷಗಳಿಂದ ಅಲ್ಲಿನ ಸರ್ಕಾರವು ನಿರ್ಬಂಧ ವಿಧಿಸಿದ್ದರಿಂದ ಜನರು ಸ್ವಗ್ರಾಮಗಳತ್ತ ತೆರಳಿರಲಿಲ್ಲ. ಇದೀಗ ನಿರ್ಬಂಧ ತೆರವಾಗಿದ್ದು, ಒಟ್ಟು 40 ದಿನಗಳ ಅವಧಿಯಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಜನರು ಪ್ರಯಾಣ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
‘ನಿರ್ಬಂಧ ತೆರವುಗೊಳಿಸಿರುವುದು ಸಂತಸ ಮೂಡಿಸಿದೆ. ಮೂರು ವರ್ಷಗಳ ಬಳಿಕ ಇದೇ ಮೊದಲ ನಮ್ಮ ಕುಟುಂಬದೊಂದಿಗೆ ಒಟ್ಟಾಗಿ ಕಾಲ ಕಳೆಯಬಹುದು’ ಎಂದು ಸ್ವಗ್ರಾಮಕ್ಕೆ ಹೊರಟಿದ್ದ ವಾಂಗ್ ಜಿಂಗ್ಲಿ ತಿಳಿಸಿದರು.
ನಿರ್ಬಂಧಗಳಿಂದ ಬೇಸತ್ತಿದ್ದ ಚೀನಾದ ನಾಗರಿಕರು ಡಿಸೆಂಬರ್‌ನಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಇದರಿಂದಾಗಿ ಅಲ್ಲಿನ ಸರ್ಕಾರವು ದೈನಂದಿನ ಕೋವಿಡ್ ಪರೀಕ್ಷೆ ಹಾಗೂ ನಿವಾಸಿಗಳ ಕ್ಯೂಆರ್ ಕೋಡ್ ಮೇಲ್ವಿಚಾರಣೆಯನ್ನು ಕೈಬಿಟ್ಟಿದೆ. ವಿಮಾನ ಪ್ರಯಾಣಿಕರಿಗೆ ವಿಧಿಸಿದ್ದ ಪ್ರತ್ಯೇಕ ವಾಸದ ನಿರ್ಬಂಧವನ್ನೂ ಕೈಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.