ADVERTISEMENT

ಭಾರತ-ಚೀನಾ ಉತ್ತಮ ಸಂಬಂಧ: ಎರಡೂ ದೇಶಗಳಿಗೂ ಹಿತ ಎಂದ ಚೀನಾ

ಪಿಟಿಐ
Published 12 ಜೂನ್ 2022, 10:47 IST
Last Updated 12 ಜೂನ್ 2022, 10:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ಚೀನಾ ಮತ್ತು ಭಾರತವು ನೆರೆ-ಹೊರೆಯ ದೇಶಗಳಾಗಿದ್ದು, ಉಭಯ ದೇಶಗಳು ಉತ್ತಮ ಬಾಂಧವ್ಯ ಕಾಪಾಡಿಕೊಂಡರೆ ಎರಡೂ ದೇಶಗಳ ಹಿತಾಸಕ್ತಿಯನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಚೀನಾದ ರಕ್ಷಣಾ ಸಚಿವ ಜನರಲ್ ವೀ ಫೆಂಘೆ ಅವರು ತಿಳಿಸಿದ್ದಾರೆ.

ವಾಸ್ತವಿಕ ಗಡಿ ನಿಯಂತ್ರಣ ರೇಖೆ ಹಾದು ಹೋಗುವ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಉಭಯ ದೇಶಗಳು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಒತ್ತಿ ಹೇಳಿದ್ದಾರೆ.

ಶಾಂಗ್ರಿ-ಲಾ ಮಾತುಕತೆ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ಅವರು, ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಎಲ್ಲಾ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳುವುದೇ ಶಾಂತಿಯ ಮಾರ್ಗವಾಗಿರುತ್ತದೆ ಎಂದರು. ಭಾರತದ ಜೊತೆಗಿನ ಗಡಿ ಬಿಕ್ಕಟ್ಟು ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಕ್ಕಟ್ಟು ಪ್ರದೇಶದಲ್ಲಿ ಶಾಂತಿ ಮರು ಸ್ಥಾಪಿಸಲು ಭಾರತದ ಜೊತೆ ಕಮಾಂಡರ್ ಹಂತದಲ್ಲಿ 15 ಸುತ್ತಿನ ಮಾತುಕತೆ ನಡೆಸಿದ್ದೇವೆ’ ಎಂದು ಹೇಳಿದರು.

ADVERTISEMENT

2 ವರ್ಷಗಳ ಹಿಂದೆ ಚೀನಾದ ಸೇನೆ ಭಾರತದ ಎಲ್ಎಸಿಯ ವಿವಿಧ ಪಾಯಿಂಟ್‌ಗಳಲ್ಲಿ ಏಕೆ ಏಕಪಕ್ಷೀಯವಾಗಿ ಪೂರ್ವ ಸ್ಥಿತಿಯನ್ನು ಬದಲಾವಣೆ ಮಾಡಿತು. ಇದರಿಂದ 45 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಉಭಯ ದೇಶಗಳ ಮಧ್ಯೆ ಗಡಿ ಬಿಕ್ಕಟ್ಟು ಉದ್ಭವಿಸಿತು. ಅಲ್ಲದೆ, ಚೀನಾದ ಈ ಕ್ರಮವು 25 ವರ್ಷಗಳಿಂದ ಉಭಯ ದೇಶಗಳು ಪಾಲಿಸಿಕೊಂಡು ಬಂದಿದ್ದ ಒಪ್ಪಂದಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಉತ್ತರಿಸುವಂತೆ ಅಮೆರಿಕದ ಚಿಂತಕರ ಚಾವಡಿಯ ಬ್ರೂಕಿಂಗ್ಸ್ ಸಂಸ್ಥೆಯ ಭಾರತದ ಯೋಜನೆಯ ನಿರ್ದೇಶಕ ಡಾ. ತನ್ವಿ ಮದನ್ ಚೀನಾವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.