ADVERTISEMENT

16 ಷರಿಯಾ ಕಾನೂನು ರದ್ದುಗೊಳಿಸಿದ ಮಲೇಷ್ಯಾ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 13:32 IST
Last Updated 9 ಫೆಬ್ರುವರಿ 2024, 13:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕ್ವಾಲಾಲಂಪುರ: ಷರಿಯಾ ಆಧಾರಿತ 16 ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು 8:1ರ ಬಹುಮತದ ತೀರ್ಪು ಪ್ರಕಟಿಸಿದೆ.

ಕೋರ್ಟ್‌ನ ಈ ತೀರ್ಪು ದೇಶದಾದ್ಯಂತ ಇರುವ ಷರಿಯಾ ಕೋರ್ಟ್‌ಗಳನ್ನು ಗೌಣವಾಗಿಸಲಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಆತಂಕ ವ್ಯಕ್ತಪಡಿಸಿದ್ದು, ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೆಲಾಂಟಾನ್ ರಾಜ್ಯದಲ್ಲಿ ವಿಪಕ್ಷ ನೇತೃತ್ವದ ಸರ್ಕಾರವು ರೂಪಿಸಿದ್ದ 16 ಕಾನೂನುಗಳನ್ನು ಈ ಪೀಠವು ಅಮಾನ್ಯಗೊಳಿಸಿದೆ. ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ನಡೆಸುವವರಿಗೆ ಶಿಕ್ಷೆ ವಿಧಿಸಲು ಷರಿಯಾ ಕಾನೂನು ರೂಪಿಸಿತ್ತು.

ಮಲೇಷ್ಯಾದ ಒಕ್ಕೂಟಕ್ಕೆ ಅನ್ವಯವಾಗುವ ಕಾಯ್ದೆ ಇರುವಾಗ ರಾಜ್ಯವು ಆ ವಿಷಯಗಳ ಮೇಲೆ ಇಸ್ಲಾಮಿಕ್ ಕಾನೂನುಗಳನ್ನು ರೂಪಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಶೇ 97ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಗ್ರಾಮೀಣ ಈಶಾನ್ಯ ರಾಜ್ಯವಾದ ಕೆಲಾಂಟನ್‌ನ ಇಬ್ಬರು ಮುಸ್ಲಿಂ ಮಹಿಳೆಯರು 2020ರಲ್ಲಿ ಷರಿಯಾ ಕಾನೂನುಗಳನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಿದ್ದರು.

ಮಲೇಷ್ಯಾವು ಎರಡು ರೀತಿಯ ಕಾನೂನು ವ್ಯವಸ್ಥೆಗಳನ್ನು ಹೊಂದಿದೆ. ಷರಿಯಾವು ನಾಗರಿಕ ಕಾನೂನುಗಳ ಜೊತೆಗೆ ಮುಸ್ಲಿಮರ ವೈಯಕ್ತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಗೊಂಡಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 75ರಷ್ಟಿರುವ ಮಲೆಯಾ ಜನಾಂಗದವರಿಗೆ ಪ್ರತ್ಯೇಕ ಕಾನೂನು ಇದೆ. ಇಲ್ಲಿ ಚೀನಾ ಮತ್ತು ಭಾರತೀಯ ಮೂಲದವರು ಅಲ್ಪಸಂಖ್ಯಾತರಾಗಿದ್ದು, ಇವರಿಗೆ ಬೇರೆ ಕಾನೂನು ಇದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.