
ಸಾಂದರ್ಭಿಕ ಚಿತ್ರ
ಕೊಲಂಬಸ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಓಹಿಯೊದಲ್ಲಿನ ನಿವಾಸಕ್ಕೆ ಹಾನಿ ಮಾಡಿದ ವ್ಯಕ್ತಿಯನ್ನು ಸೀಕ್ರೆಟ್ ಸರ್ವಿಸ್ ಏಜೆಂಟರು ಬಂಧಿಸಿದ್ದು, ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ವಿಲಿಯಂ ಡಿ. ಡಿಫೋರ್ (26) ಬಂಧಿತ ವ್ಯಕ್ತಿ. ಭಾನುವಾರ ಮಧ್ಯರಾತ್ರಿ ವ್ಯಾನ್ಸ್ ಅವರ ಮನೆಯ ಬೇಲಿ ಹಾರಿ, ಹಲವು ಕಿಟಕಿಗಳನ್ನು ಸುತ್ತಿಗೆಯಿಂದ ಒಡೆಯಲು ಯತ್ನಿಸಿದ ಆರೋಪ ಈ ವ್ಯಕ್ತಿಯ ಮೇಲಿದೆ.
ಈತನ ಕೃತ್ಯದಿಂದ 14 ಕಿಟಕಿಗಳಿಗೆ ಹಾನಿಯಾಗಿದ್ದು, ಅದರ ಸುತ್ತಲಿನ ಭದ್ರತಾ ವ್ಯವಸ್ಥೆಗೂ ಧಕ್ಕೆಯಾಗಿದೆ. ಹಾನಿಯ ಮೊತ್ತವನ್ನು 28,000 ಡಾಲರ್ (₹25.17 ಲಕ್ಷ) ಎಂದು ಅಂದಾಜಿಸಲಾಗಿದೆ ಎಂದು ಸೀಕ್ರೆಟ್ ಸರ್ವಿಸ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಆರೋಪಿಯ ವಿರುದ್ಧದ ಕ್ರಿಮಿನಲ್ ಅತಿಕ್ರಮಣ, ಕ್ರಿಮಿನಲ್ ಹಾನಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ 11,000 ಡಾಲರ್ (9.89 ಲಕ್ಷ) ಮೊತ್ತದ ಬಾಂಡ್ ಸಲ್ಲಿಸುವಂತೆ ಹ್ಯಾಮಿಲ್ಟನ್ ಕೌಂಟಿ ನ್ಯಾಯಾಲಯ ಸೂಚಿಸಿದೆ. ಈ ಆರೋಪಿ ಮೇಲೆ 2023ರ ಕ್ರಿಮಿನಲ್ ಅತಿಕ್ರಮಣದ ಆರೋಪದ ವಿಚಾರಣೆಯೂ ಬಾಕಿಯಿದ್ದು, ಅದರ ವಿಚಾರಣೆ ಇದೇ 15ಕ್ಕೆ ನಿಗದಿಯಾಗಿದೆ.
ಸರ್ಕಾರಿ ಆಸ್ತಿಗೆ ಹಾನಿ ಮಾಡುವುದು, ನಿರ್ಬಂಧಿತ ಪ್ರದೇಶವನ್ನು ಅತಿಕ್ರಮವಾಗಿ ಪ್ರವೇಶಿಸಿ ಹಿಂಸಾಚಾರದಲ್ಲಿ ತೊಡಗುವುದು ಮತ್ತು ಫೆಡರಲ್ ಅಧಿಕಾರಿಗಳ ಮೇಲೆ ಹಲ್ಲೆ, ಪ್ರತಿರೋಧ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಓಹಿಯೊದ ದಕ್ಷಿಣ ಜಿಲ್ಲೆಯ ಯುಎಸ್ ಅಟಾರ್ನಿ ಕಚೇರಿಯು ಆರೋಪಿ ಮೇಲೆ ಹೊರಿಸಿದೆ.
ಇದರಲ್ಲಿ ಮೊದಲ ಎರಡು ಆರೋಪಗಳು ಸಾಬೀತಾದರೆ ತಲಾ 10 ವರ್ಷಗಳ ಜೈಲು ಶಿಕ್ಷೆ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ, ಪ್ರತಿರೋಧ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳು ಸಾಬೀತಾದರೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.