ADVERTISEMENT

ಚೀನಾದಲ್ಲಿ ಭಾರಿ ಪ್ರವಾಹ: 30 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:46 IST
Last Updated 29 ಜುಲೈ 2025, 4:46 IST
   

ಬೀಜಿಂಗ್: ಚೀನಾದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಲ್ಲಿ ಮೂವತ್ತು ಜನರು ಸಾವಿಗೀಡಾಗಿದ್ದು, 80,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಬೀಜಿಂಗ್ ನಗರಸಭೆಯ ಪ್ರವಾಹ ನಿಯಂತ್ರಣ ನಿರ್ವಹಣಾ ಕೇಂದ್ರ ಕಚೇರಿ ಮಂಗಳವಾರ ತಿಳಿಸಿದೆ.

ಪರ್ವತ ಶ್ರೇಣಿಯ ಜಿಲ್ಲೆಗಳಾದ ಮಿಯುನ್‌ನಲ್ಲಿ 28 ಮತ್ತು ಯಾಂಕಿಂಗ್‌ನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಬೀಜಿಂಗ್ ನಗರದಾದ್ಯಂತ ಒಟ್ಟು 80,332 ಜನರನ್ನು ಸ್ಥಳಾಂತರಿಸಲಾಗಿದೆ. ಮಿಯುನ್‌ನಲ್ಲಿ ಗರಿಷ್ಠ ಮಳೆಯಾಗಿದ್ದು, 543.4 ಮಿಮೀ ತಲುಪಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಳೆಗಾಳಿಯಿಂದ 31 ರಸ್ತೆಗಳು ಹಾನಿಗೊಳಗಾಗಿದ್ದು, 136 ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಸೋಮವಾರ ರಾತ್ರಿಯ ಹೊತ್ತಿಗೆ, ಬೀಜಿಂಗ್‌ನ ನಗರಸಭೆಯ ಪ್ರವಾಹ ನಿಯಂತ್ರಣ ಪ್ರಧಾನ ಕಚೇರಿಯು ನಗರದಾದ್ಯಂತ ಪ್ರವಾಹ ನಿಯಂತ್ರಣ ತುರ್ತು ಸ್ಪಂದನಾ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿದೆ.

ಉಕ್ಕಿ ಹರಿಯುತ್ತಿರುವ ನದಿಯಿಂದ ದೂರ ಇರಲು ಬೀಜಿಂಗ್ ಜನರಿಗೆ ಸೂಚನೆ ನೀಡಲಾಗಿದೆ.

ವಾರಾಂತ್ಯದಲ್ಲಿ ಆರಂಭವಾದ ಮಳೆ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ತೀವ್ರಗೊಂಡಿದೆ. 8 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ಕಾಣೆಯಾದವರನ್ನು ಹುಡುಕುವ, ಪ್ರವಾಹದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸುವ ಕೆಲಸ ಮತ್ತು ಅಪಾಯದಲ್ಲಿರುವವರನ್ನು ತಕ್ಷಣ ಸ್ಥಳಾಂತರಿಸುವ ಮೂಲಕ ಸಾವುನೋವುಗಳನ್ನು ಕಡಿಮೆ ಮಾಡಲು ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಕರೆ ನೀಡಿದ್ದಾರೆ.

ಕೆಟ್ಟ ಮತ್ತು ವಿಪರೀತ ಸನ್ನಿವೇಶಗಳಿಗೆ ಯೋಜನೆ ರೂಪಿಸುವುದು, ಜವಾಬ್ದಾರಿಗಳನ್ನು ಸ್ಪಷ್ಟಪಡಿಸುವುದು, ಪ್ರವಾಹ ನಿಯಂತ್ರಣ ಕ್ರಮಗಳನ್ನು ಸೂಕ್ಷ್ಮವಾಗಿ ಕಾರ್ಯಗತಗೊಳಿಸುವುದು, ಅಪಾಯಕಾರಿ ಪ್ರದೇಶಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು. ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ರಕ್ಷಕರು ಹಾಗೂ ಸರಬರಾಜನ್ನು ಖಚಿತಪಡಿಸುವುದು ಅಗತ್ಯವೆಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜನರ ಜೀವ ಮತ್ತು ಅವರ ಆಸ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾದಷ್ಟು ಬೇಗ ತುರ್ತು ಸ್ಪಂದನೆಯನ್ನು ಸಕ್ರಿಯಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.