ಸಾಂದರ್ಭಿಕ ಚಿತ್ರ
ಪೋರ್ಟ್ ಸುಡಾನ್: ದೇಶದ ದಕ್ಷಿಣ ಭಾಗದ ಹಳ್ಳಿಗಳ ಮೇಲೆ ಮೂರು ದಿನ ದಾಳಿ ನಡೆಸಿದ ಅರೆಸೇನಾ ಪಡೆಯು, ಮಹಿಳೆಯರು– ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಜನರನ್ನು ಕೊಂದಿದೆ.
ಸೇನೆಯೊಂದಿಗೆ ಎರಡು ವರ್ಷಗಳಿಂದಲೂ ಸಂಘರ್ಷಕ್ಕಿಳಿದಿರುವ ಅರೆಸೇನಾ ಪಡೆಯ ಕ್ಷಿಪ್ರ ಬೆಂಬಲ ಪಡೆಯ (ಆರ್‌ಎಸ್‌ಎಫ್) ಯೋಧರು, ವೈಟ್ ನೈಲ್ ರಾಜ್ಯದ ಅಲ್– ಕದರಿಸ್ ಮತ್ತು ಅಲ್ ಖೆಲ್ವಾತ್ ಗ್ರಾಮಗಳಲ್ಲಿ ನಿರಾಯುಧ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆಂತರಿಕ ಸಂಘರ್ಷದ ಮೇಲ್ವಿಚಾರಣೆ ನಡೆಸುತ್ತಿರುವ ವಕೀಲರ ಗುಂಪು ಮಂಗಳವಾರ ತಿಳಿಸಿದೆ.
ಸೇನೆಯ ಉಪಸ್ಥಿತಿ ಇಲ್ಲದ ಕಡೆ ಶನಿವಾರದಿಂದಲೂ ಆರ್‌ಎಸ್‌ಎಫ್ ದಾಳಿ ನಡೆಸಿದ್ದು, ನಾಗರಿಕರ ಹತ್ಯೆ, ಅಪಹರಣ, ಲೂಟಿ ನಡೆಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ದೂರಿದೆ.
ಕೆಲವು ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳಲು ನೈಲ್ ನದಿ ದಾಟುವಾಗ ಆರ್‌ಎಸ್‌ಎಫ್ ಸಿಬ್ಬಂದಿ ಗುಂಡಿನ ಸುರಿಮಳೆಗರೆದಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಕೆಲವರು ನದಿಗೆ ಹಾರಿದ್ದು, ಮುಳುಗಿ ಮೃತಪಟ್ಟಿದ್ದಾರೆ. ಹಳ್ಳಿಗರ ಮೇಲಿನ ದಾಳಿಯನ್ನು ವಕೀಲರ ಗುಂಪು ನರಮೇಧ ಎಂದಿದೆ.
ಸುಡಾನ್‌ನಲ್ಲಿ 2023ರ ಏಪ್ರಿಲ್‌ನಿಂದಲೂ ಸೇನೆ ಮತ್ತು ಅರೆಸೇನಾಪಡೆ ನಡುವೆ ಸಂಘರ್ಷ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.