ADVERTISEMENT

ಇಸ್ರೇಲ್ | ಪ್ರಧಾನಿ ನೇತನ್ಯಾಹು ವಿರುದ್ಧ ಜೆರುಸಲೆಂನಲ್ಲಿ ಬೃಹತ್ ಪ್ರತಿಭಟನೆ

ಏಜೆನ್ಸೀಸ್
Published 2 ಆಗಸ್ಟ್ 2020, 2:58 IST
Last Updated 2 ಆಗಸ್ಟ್ 2020, 2:58 IST
ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು
ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು   
ಜೆರುಸಲೆಂ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ಅಧಿಕೃತ ನಿವಾಸದೆದುರು ಶನಿವಾರ ಜಮಾಯಿಸಿರುವ ಸಾವಿರಾರು ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಭಟನೆಗಳು ಆರಂಭವಾದಾಗಿನಿಂದ, ರಾಜಧಾನಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ರ‌್ಯಾಲಿ ಇದಾಗಿದೆ ಎಂದು ಇಸ್ರೇಲ್‌ ಟೈಮ್ಸ್‌ ವರದಿ ಮಾಡಿದೆ.ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.
ಕರಾವಳಿ ನಗರ ಸೀಸೆರಿಯಾದಲ್ಲಿರುವ ಪ್ರಧಾನಿಯವರ ಖಾಸಗಿ ನಿವಾಸದ ಎದುರೂ ಸಾವಿರಾರು ಜನರು ಪ್ರತಿಭಟನಾ ಫಲಕ ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ, ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
‘ಪ್ರತಿಭಟನೆಯು ಪೊಲೀಸ್‌ ಅಧಿಕಾರಿಗಳು, ನಾಗರಿಕರು ಹಾಗೂ ಸಾರ್ವಜನಿಕ ಆಸ್ತಿ ಹಾನಿಗೆ ಕಾರಣವಾಗುವಂತಹ ಹಿಂಸಾಚಾರಕ್ಕೆ ತಿರುಗಲು ಇಸ್ರೇಲ್‌ ಪೊಲೀಸರು ಬಿಡುವುದಿಲ್ಲ. ಗಲಭೆ, ಕಾನೂನು ಉಲ್ಲಂಘನೆ ಮತ್ತು ವಿಧ್ವಂಸಕ ಕೃತ್ಯಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಮತ್ತು ಅದರಂತೆ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನೇತನ್ಯಾಹು ಅವರು ವಂಚನೆ, ನಂಬಿಕೆ ದ್ರೋಹ ಮತ್ತು ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ.ದೀರ್ಘಕಾಲದ ರಾಜಕೀಯ ಅಸ್ಥಿರತೆಯ ನಂತರ ಈಚೆಗಷ್ಟೇ ಅವರುಅಧಿಕಾರಕ್ಕೆ ಮರಳಿದ್ದರು. ದೇಶದಲ್ಲಿ ಅಧಿಕಾರದಲ್ಲಿರುವ ಪ್ರಧಾನಿಯ ವಿರುದ್ಧ ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.