ADVERTISEMENT

ದೇಶದೊಳಗಿನ ಬಂಡುಕೋರರ ಬಳಿ ಚೀನಾ ಶಸ್ತ್ರಾಸ್ತ್ರ: ಮಯನ್ಮಾರ್ ಆರೋಪ

ಏಜೆನ್ಸೀಸ್
Published 2 ಜುಲೈ 2020, 12:12 IST
Last Updated 2 ಜುಲೈ 2020, 12:12 IST
ಮಯನ್ಮಾರ್ ಮಿನ್ ಆಂಗ್ ಹೇಲಿಂಗ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಮಯನ್ಮಾರ್ ಮಿನ್ ಆಂಗ್ ಹೇಲಿಂಗ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್   

ಮಯನ್ಮಾರ್: ದೇಶದೊಳಗಿನ ಬಂಡುಕೋರ ಗುಂಪುಗಳಿಗೆ 'ಬಲಾಢ್ಯ' ರಾಷ್ಟ್ರದ ಸಹಕಾರವಿದೆ. ಬಂಡುಕೋರರು ಉಪಯೋಗಿಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಚೀನಾದಿಂದಲೇ ತಯಾರಾಗಿವೆ ಎಂದು ಮಯನ್ಮಾರ್ ಪರೋಕ್ಷವಾಗಿ ಆರೋಪಿಸಿದ್ದು, ಬಂಡುಕೋರರನ್ನು ನಿಗ್ರಹಿಸಲು ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದಿದೆ.

ರಷ್ಯಾದ ಸರ್ಕಾರಿ ಟಿವಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಯನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್, ಮಯನ್ಮಾರ್ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳನ್ನು ‘ಬಲಾಢ್ಯರಾಷ್ಟ್ರ’ ಬೆಂಬಲಿಸುತ್ತಿದೆ ಎಂದು ಹೇಳಿದ್ದಾರೆ.
ಮಯನ್ಮಾರ್‌ನ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಜನರಲ್ ಜಾ ಮಿನ್ ಟುನ್ ಮಯನ್ಮಾರ್ ಸಶಸ್ತ್ರ ಪಡೆಗಳ ಮುಖ್ಯಸ್ಥರು ನೀಡಿದ ಹೇಳಿಕೆಯನ್ನು ವಿವರಿಸಿದ್ದಾರೆ.

ಅಲ್ಲದೆ, ಚೀನಾದ ಗಡಿಯ ಪಶ್ಚಿಮ ಮಯನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳಾದ ಅರಾಕನ್ ಆರ್ಮಿ (ಎಎ) ಮತ್ತು ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‌ಎಸ್‌ಎ) ಯನ್ನು ಸೇನಾ ಮುಖ್ಯಸ್ಥರು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ಅರಾಕನ್ ಆರ್ಮಿ (ಎಎ)ಯ ಹಿಂದೆ ‘ಬಲಾಢ್ಯರಾಷ್ಟ್ರ’ದ ಕೈವಾಡ ಇದೆ ಎಂದು ಅವರು ಹೇಳಿದ್ದಾರೆ. 2019ರಲ್ಲಿ ಸೇನೆಯ ಮೇಲೆ ನಡೆಸಿದ ದಾಳಿಯ ಸಮಯದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಇದ್ದವು ಎಂದಿದ್ದಾರೆ.

ನವೆಂಬರ್ 2019ರಲ್ಲಿಮಯನ್ಮಾರ್ ಸೇನೆ ನಿಷೇಧಿತ ತಾಂಗ್ ನ್ಯಾಷನಲ್ ಲಿಬರೇಶನ್ ಮೇಲೆ ದಾಳಿ ನಡೆಸಿದಾಗ ಆರ್ಮಿಯಿಂದ ಬೃಹತ್ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿತ್ತು. ಈ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸುಮಾರು 70,000 ಡಾಲರ್ ಮತ್ತು 90,000 ಡಾಲರ್ ವೆಚ್ಚವಾಗುತ್ತದೆ. ಇವು ಚೀನಾದಿಂದಲೇ ತಯಾರಾದ ಕ್ಷಿಪಣಿಗಳು ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ತುನ್ ನೈ ಘೋಷಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಚೀನಾದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಯನ್ಮಾರ್ ಜನಾಂಗೀಯ ಬಂಡಾಯ ಗುಂಪುಗಳು ಹೆಚ್ಚಾಗಿ
ಚೀನೀ ಶಸ್ತ್ರಾಸ್ತ್ರಗಳನ್ನು ಬಳಸುತ್ತವೆ, ಮಯನ್ಮಾರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಈ ತಂತ್ರಗಾರಿಕೆ ನಡೆಯುತ್ತಿರುವ ಅನುಮಾನಗಳಿವೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.