ನವದೆಹಲಿ/ಟೆಹರಾನ್: ಇಸ್ರೇಲ್ ಹಾಗೂ ಇರಾನ್ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಭಾರತದ ವಿದ್ಯಾರ್ಥಿಗಳನ್ನು ಟೆಹರಾನ್ ನಗರದಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ 110 ಮಂದಿ ಅರ್ಮೇನಿಯಾ ಗಡಿಯನ್ನು ದಾಟಿದ್ದಾರೆ.
ಸಾಧ್ಯವಿರುವ ಎಲ್ಲ ನೆರವು ನೀಡುವ ಉದ್ದೇಶದಿಂದ ಇಸ್ರೇಲ್‌ನಲ್ಲಿರುವ ಭಾರತೀಯರೊಂದಿಗೆ ರಾಯಭಾರ ಕಚೇರಿಯು ನಿರಂತರ ಸಂಪರ್ಕದಲ್ಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಕೆಲವು ಭಾರತೀಯರಿಗೆ ಅರ್ಮೇನಿಯಾ ಗಡಿಯ ಮೂಲಕ ಇರಾನ್‌ನಿಂದ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘದ ಪ್ರಕಾರ, ಉರ್ಮಿಯ ವೈದ್ಯಕೀಯ ವಿಶ್ವವಿದ್ಯಾಲಯದ 110 ವಿದ್ಯಾರ್ಥಿಗಳ ಪೈಕಿ ಕಾಶ್ಮೀರ ಕಣಿವೆ ಮೂಲದ 90 ವಿದ್ಯಾರ್ಥಿಗಳು ಅರ್ಮೇನಿಯಾ ಗಡಿಯನ್ನು ಸುರಕ್ಷಿತವಾಗಿ ದಾಟಿದ್ದಾರೆ.
ಸೂಚನೆ: ಎಲ್ಲ ಭಾರತೀಯರು ಟೆಹರಾನ್ ನಗರದಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಹಾಗೂ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಸೂಚಿಸಿದೆ.
ಭಾರತೀಯರು ವಾಸವಿರುವ ಸ್ಥಳ ಹಾಗೂ ಸಂಪರ್ಕ ಸಂಖ್ಯೆಯನ್ನು ನೀಡಬೇಕು. ತಮ್ಮ ಸ್ವಂತ ಸಂಪನ್ಮೂಲ ಬಳಸಿಕೊಂಡು ಟೆಹರಾನ್ ನಗರದಿಂದ ಹೊರಗೆ ತೆರಳಬೇಕು ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಇರಾನ್ ಹಾಗೂ ಇಸ್ರೇಲ್ ನಡುವಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ 24x7 ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 1800118797 ಸಂಪರ್ಕಿಸಬಹುದು ಎಂದು ನವದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.