ADVERTISEMENT

ವಿಶ್ವಸಂಸ್ಥೆಯಲ್ಲಿ ‘ಧ್ಯಾನ ದಿನಾಚರಣೆ’ | ಧ್ಯಾನವು ಧರ್ಮಕ್ಕೆ ಅತೀತ: ರವಿಶಂಕರ್

ಪಿಟಿಐ
Published 22 ಡಿಸೆಂಬರ್ 2024, 0:04 IST
Last Updated 22 ಡಿಸೆಂಬರ್ 2024, 0:04 IST
ಶ್ರೀ ಶ್ರೀ ರವಿಶಂಕರ್‌
ಶ್ರೀ ಶ್ರೀ ರವಿಶಂಕರ್‌   

ವಿಶ್ವಸಂಸ್ಥೆ: ‘ಇಂದು ಧ್ಯಾನವು ಐಷಾರಾಮ ಅಲ್ಲ; ಅದು ಒಂದು ಅಗತ್ಯ’ ಎಂದು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ನಡೆದ ಪ್ರಥಮ ‘ವಿಶ್ವ ಧ್ಯಾನ ದಿನಾಚರಣೆ’ಯಲ್ಲಿ ಹೇಳಿದರು.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಕಚೇರಿಯು ‘ವಿಶ್ವ ಧ್ಯಾನ ದಿನಾಚರಣೆ’ಯ ಅಂಗವಾಗಿ ‘ಜಾಗತಿಕ ಶಾಂತಿ ಮತ್ತು ಸೌಹಾರ್ದಕ್ಕಾಗಿ ಧ್ಯಾನ’ ಹೆಸರಿನ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರವಿಶಂಕರ್ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಧ್ಯಾನವನ್ನು ಯಾವುದೇ ವ್ಯಕ್ತಿ ಯಾವುದೇ ಸ್ಥಳದಲ್ಲಿ ಹಾಗೂ ಎಲ್ಲೆಡೆಯೂ ಮಾಡಬಹುದು...’ ಎಂದು ಅವರು ಹೇಳಿದರು. ಧ್ಯಾನ ಎಂಬ ಪದವನ್ನು ಕೇಳಿದಾಕ್ಷಣವು ಕೆಲವರು, ಇದು ಯಾವುದೋ ಒಂದು ಧರ್ಮಕ್ಕೆ ಸೇರಿರಬೇಕು ಅಥವಾ ತಮ್ಮ ಧರ್ಮದಲ್ಲಿ ಇದನ್ನು ಹೇಳಿಕೊಟ್ಟಿಲ್ಲ ಎಂದು ಭಾವಿಸಬಹುದು. ಆದರೆ ಧ್ಯಾನವು ಎಲ್ಲ ಧರ್ಮಗಳನ್ನು, ಭೌತಿಕ ಗಡಿಗಳನ್ನು ಮತ್ತು ವಯೋಮಾನಗಳನ್ನು ಮೀರಿದೆ ಎಂದರು. 

ADVERTISEMENT

ವಿಶ್ವದಾಖಲೆ: ಶ್ರೀ ಶ್ರೀ ರವಿಶಂಕರ್ ಜೊತೆಗಿನ ಧ್ಯಾನ ಕಾರ್ಯಕ್ರಮವು ಗಿನ್ನಿನ್ ದಾಖಲೆ ಪುಸ್ತಕದಲ್ಲಿ, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಮತ್ತ ವರ್ಲ್ಡ್‌ ರೆಕಾರ್ಡ್ಸ್‌ ಯೂನಿಯನ್‌ನಲ್ಲಿ ಸ್ಥಾನ ಪಡೆದಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಪ್ರಕಟಣೆ ತಿಳಿಸಿದೆ.

ವಿಶ್ವ ಧ್ಯಾನ ದಿನಾಚರಣೆಯ ಉದ್ಘಾಟನೆಯ ನಂತರ ಶ್ರೀ ಶ್ರೀ ರವಿಶಂಕರ್ ಅವರು ಧ್ಯಾನ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ಇದನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ಯೂಟ್ಯೂಬ್‌ನಲ್ಲಿ ಮಾರ್ಗದರ್ಶನದ ಮೂಲಕ ಧ್ಯಾನ ಹೇಳಿಕೊಟ್ಟ ಕಾರ್ಯಕ್ರಮವನ್ನು ಅತಿಹೆಚ್ಚಿನ ಜನ ವೀಕ್ಷಿಸಿದ್ದಕ್ಕೆ, ಈ ರೀತಿಯ ಕಾರ್ಯಕ್ರಮದಲ್ಲಿ ಅತಿಹೆಚ್ಚು ದೇಶಗಳ ಜನ ಭಾಗಿಯಾಗಿದ್ದಕ್ಕೆ ಹಾಗೂ ಭಾರತದ ಎಲ್ಲ ರಾಜ್ಯಗಳಿಂದ ಅತ್ಯಂತ ಹೆಚ್ಚು ಜನ ಭಾಗಿಯಾಗಿದ್ದಕ್ಕೆ, 24 ತಾಸುಗಳ ಅವಧಿಯಲ್ಲಿ ಈ ಬಗೆಯ ಕಾರ್ಯಕ್ರಮವು ಯೂಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದಿದ್ದಕ್ಕೆ ಈ ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.