ADVERTISEMENT

ಮೇಯರ್ ಹತ್ಯೆಗೆ ಖಂಡನೆ: ಮೆಕ್ಸಿಕೊದಾದ್ಯಂತ ತೀವ್ರಗೊಂಡ ‘ಜೆನ್ ಝೀ’ ಪ್ರತಿಭಟನೆ

ಏಜೆನ್ಸೀಸ್
Published 16 ನವೆಂಬರ್ 2025, 6:25 IST
Last Updated 16 ನವೆಂಬರ್ 2025, 6:25 IST
<div class="paragraphs"><p>ಮೆಕ್ಸಿಕೊದಲ್ಲಿ ಪ್ರತಿಭಟನೆ</p></div>

ಮೆಕ್ಸಿಕೊದಲ್ಲಿ ಪ್ರತಿಭಟನೆ

   

ಮೆಕ್ಸಿಕೊ ಸಿಟಿ: ಈ ತಿಂಗಳ ಆರಂಭದಲ್ಲಿ ನಡೆದ ಮೇಯರ್‌ ಹತ್ಯೆಯ ನಂತರ ಹೆಚ್ಚುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮೆಕ್ಸಿಕೊದಾದ್ಯಂತ ಸಾವಿರಾರು ಜನರು ‘ಜನರೇಷನ್ ಝಡ್’ (ಜೆನ್ ಝೀ) ಬ್ಯಾನರ್ ಅಡಿಯಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಮೆಕ್ಸಿಕೊ ಅಧ್ಯಕ್ಷ ಕ್ಲೌಡಿಯಾ ಶೀನ್‌ಬಾಮ್ ವಾಸಿಸುವ ಅರಮನೆಯ ಸುತ್ತಲಿನ ಬೇಲಿಗಳನ್ನು ಮುಸುಕು ಧರಿಸಿದ ಪ್ರತಿಭಟನಕಾರರ ಒಂದು ಗುಂಪು ಕೆಡವಿತ್ತು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಇದರಿಂದಾಗಿ ಘರ್ಷಣೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಪ್ರತಿಭಟನೆ ವೇಳೆ 100ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ 20 ಮಂದಿ ನಾಗರಿಕರು ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ, ಪ್ರತಿಭಟನನಿರತ 20 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ರಾಜ್ಯವಾದ ಮೈಕೋವಕನ್ ಸೇರಿದಂತೆ ಮೆಕ್ಸಿಕೊದಾದ್ಯಂತ ವಿವಿಧ ನಗರಗಳಲ್ಲೂ ಪ್ರತಿಭಟನೆಗಳು ನಡೆದಿವೆ. ನವೆಂಬರ್ 1ರಂದು ಉರುಪಾನ್ ಮೇಯರ್ ಕಾರ್ಲೋಸ್ ಮಾಂಜೊ ಅವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಕಾರ್ಲೋಸ್ ಹತ್ಯೆ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ಶೀನ್‌ಬಾಮ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.

‘ಜನರೇಷನ್ ಝಡ್ ಮೆಕ್ಸಿಕೊ’ ಎಂದು ಗುರುತಿಸಿಕೊಂಡಿರುವ ಗುಂಪೊಂದು ಪ್ರತಿಭಟನೆಗಳಿಗೆ ಕರೆ ನೀಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಸಿತ್ತು ಎಂದು ತಿಳಿದುಬಂದಿದೆ.

ಸರ್ಕಾರದ ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗದಿಂದ ಬೇಸತ್ತು ‘ಜನರೇಷನ್ ಝಡ್ ಮೆಕ್ಸಿಕೊ’ ಗುಂಪು ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಯುವಕರಿಗೆ ಕರೆ ನೀಡಿದೆ.

ಜನರೇಷನ್ ಝಡ್ (ಜೆನ್ ಝೀ) ಎಂದರೆ 1997ರಿಂದ 2012ರ ಅವಧಿಯಲ್ಲಿ ಜನಿಸಿದರು ಎಂದರ್ಥ. ಪ್ರಪಂಚದಾದ್ಯಂತದ ಇತರ ದೇಶಗಳಲ್ಲಿನ ಪ್ರತಿಭಟನಾ ಗುಂಪುಗಳು ‘ಜೆನ್ ಝೀ’ ಘೋಷವಾಕ್ಯದಡಿ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಒತ್ತಾಯಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.