ADVERTISEMENT

ಭಾರತ, ಚೀನಾಕ್ಕೆ ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 16:28 IST
Last Updated 11 ಡಿಸೆಂಬರ್ 2025, 16:28 IST
<div class="paragraphs"><p>ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ</p></div>

ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ

   

ಮೆಕ್ಸಿಕೊ: ಭಾರತ, ಚೀನಾ ಸೇರಿದಂತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಲು ಮೆಕ್ಸಿಕೋದ ಸೆನೆಟ್ ಒಪ್ಪಿಗೆ ನೀಡಿದೆ.

ಹೊಸ ತೆರಿಗೆ ದರವು 2026ರ ಜನವರಿಯಿಂದ ಜಾರಿಗೆ ಬರಲಿದೆ. ಕಾರು, ಆಟೊ, ವಾಹನಗಳ ಬಿಡಿಭಾಗಗಳು, ಜವಳಿ, ಪ್ಲಾಸ್ಟಿಕ್‌, ಪಾದರಕ್ಷೆ, ಉಕ್ಕು ಸೇರಿದಂತೆ 1,400ಕ್ಕೂ ಹೆಚ್ಚು ಸರಕುಗಳಿಗೆ ಪರಿಷ್ಕೃತ ಸುಂಕ ಅನ್ವಯಿಸಲಿದೆ. ಕೆಲವು ಸರಕುಗಳಿಗೆ ಹೆಚ್ಚುವರಿಯಾಗಿ ಶೇ 35ರಷ್ಟು ಆಮದು ಸುಂಕ ಪಾವತಿಸಬೇಕಾಗುತ್ತದೆ. 

ADVERTISEMENT

ಚೀನಾ, ಭಾರತ, ದಕ್ಷಿಣ ಕೊರಿಯಾ, ಥಾಯ್ಲೆಂಡ್‌ ಮತ್ತು ಇಂಡೊನೇಷ್ಯಾ ದೇಶಗಳು ಮೆಕ್ಸಿಕೊ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿಲ್ಲ. ಈ ದೇಶಗಳ ರಫ್ತಿನ ಮೇಲೆ ಸುಂಕ ಹೇರಿಕೆಯು ನಕಾರಾತ್ಮಕ ಪರಿಣಾಮ ಬೀರಲಿದೆ. ಚೀನಾಕ್ಕೆ ಇದು ಹೆಚ್ಚಿನ ಹೊಡೆತ ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಬುಧವಾರ ಸಂಜೆ ಮೆಕ್ಸಿಕೊದ ಸೆನೆಟ್‌ ಆಮದು ಸುಂಕ ಹೆಚ್ಚಳದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಆಡಳಿತಾರೂಢ ಮೊರೆನಾ ಪಕ್ಷದ ಅಧ್ಯಕ್ಷೆ ಕ್ಲಾಡಿಯಾ ಶೀನ್‌ಬಾಮ್‌ ಅವರು ತೆರಿಗೆ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಇದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ತೆರಿಗೆ ಹೆಚ್ಚಳದ ಪರವಾಗಿ 76 ಸದಸ್ಯರು ಮತ ಚಲಾಯಿಸಿದರೆ, ಐದು ಮಂದಿ ಇದಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರು. 35 ಸದಸ್ಯರು ಗೈರಾಗಿದ್ದರು. 

‘ತೆರಿಗೆ ಹೆಚ್ಚಳಕ್ಕೆ ಟ್ರಂಪ್‌ ಕಾರಣ’

‘ಮೆಕ್ಸಿಕೊದ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿರುವ ಅಮೆರಿಕದ ಜತೆಗೆ ನಡೆಯುತ್ತಿರುವ ಮಾತುಕತೆಯೇ ಆಮದು ಸುಂಕ ಹೆಚ್ಚಳಕ್ಕೆ ಕಾರಣ’ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾವು ಅಮೆರಿಕದ ಮಾರುಕಟ್ಟೆ ಪ್ರವೇಶಿಸಲು ಮೆಕ್ಸಿಕೊವನ್ನು ಹಿಂಬಾಗಿಲಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಇದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಮೆಕ್ಸಿಕೊದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧ್ಯಕ್ಷೆ ಕ್ಲಾಡಿಯಾ ಶೀನ್‌ಬಾಮ್‌ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.