ADVERTISEMENT

‍ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ

ಪಿಟಿಐ
Published 5 ಆಗಸ್ಟ್ 2021, 6:03 IST
Last Updated 5 ಆಗಸ್ಟ್ 2021, 6:03 IST
,
,   

ಲಾಹೋರ್‌: ಇಲ್ಲಿನ ಪಂಜಾಬ್‌ ಪ್ರಾಂತ್ಯದಲ್ಲಿರುವ ಹಿಂದೂ ದೇವಾಲಯದ ಮೇಲೆ ಬುಧವಾರ ಮುಸ್ಲಿಮರ ಗುಂಪೊಂದು ದಾಳಿ ಮಾಡಿದ್ದರಿಂದ ದೇವಾಲಯದ ಕೆಲವು ಭಾಗಗಳು ಸುಟ್ಟು ಹೋಗಿದ್ದು, ದೇವರ ಮೂರ್ತಿಗಳೂ ಹಾನಿಗೊಂಡಿವೆ.

ದೇವಾಲಯದ ಮೇಲೆ ನಡೆದ ದಾಳಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾದ ನಂತರ ಪರಿಸ್ಥಿತಿ ನಿಯಂತ್ರಿಸಲು ಪಾಕಿಸ್ತಾನಿ ರೇಂಜರ್‌ಗಳನ್ನು ಕರೆಸಲಾಗಿದೆ.

ಲಾಹೋರ್‌ನಿಂದ 590 ಕಿ.ಮೀ ದೂರದಲ್ಲಿರುವ ರಹಿಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದಲ್ಲಿರುವ ಮುಸ್ಲಿಂ ಸೆಮಿನರಿಯ ಗ್ರಂಥಾಲಯವನ್ನು ಅಪವಿತ್ರಗೊಳಿಸಿದ್ದಕ್ಕೆ ಪ್ರತಿಯಾಗಿ ಬುಧವಾರ ಮುಸ್ಲಿಂ ಸಮುದಾಯಕ್ಕೆ ಸೇರಿದ ಗುಂಪು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಳೆದ ವಾರ ಇದೇ ಭೋಂಗ್‌ ಪ್ರದೇಶದಲ್ಲಿರುವ ಸೆಮಿನರಿಯ ಗ್ರಂಥಾಲಯದಲ್ಲಿಎಂಟು ವರ್ಷದ ಹಿಂದೂ ಬಾಲಕನೊಬ್ಬ ಶೌಚ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಈ ಘಟನೆ ದಶಕಗಳಿಂದ ಹಿಂದೂ ಮತ್ತು ಮುಸ್ಲಿಮರು ಶಾಂತಿ – ಸೌಹಾರ್ದದಿಂದ ನೆಲೆ‌ಸಿರುವ ಭೋಂಗ್‌ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಕಾರಣವಾಯಿತು.

ಬುಧವಾರ, ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸಂಸದ ಡಾ.ರಮೇಶ್ ಕುಮಾರ್ ವಾಂಕ್ವಾನಿ, ದೇವಾಲಯದ ಮೇಲೆ ದಾಳಿಯ ಮಾಡಿರುವ ದೃಶ್ಯಾವಳಿಗಳನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಕಾನೂನು ಸುವ್ಯವಸ್ಥೆ ವಿಭಾಗದವರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಬೇಕು‘ ಎಂದುಆಗ್ರಹಿಸಿದ್ದಾರೆ.‌

‘ಘಟನೆಯ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು‘ ಎಂದು ರಮೇಶ್ ಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.