ADVERTISEMENT

Explainer | ಕಾಡಿನ ಬೆಂಕಿಯ ಸುಳಿಯಲ್ಲಿ ಆಸ್ಟ್ರೇಲಿಯಾ: ಅಪಾಯದಲ್ಲಿ ಜೀವನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 4:39 IST
Last Updated 15 ಜನವರಿ 2020, 4:39 IST
ನ್ಯೂ ಸೌಥ್‌ವೇಲ್‌ನಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು – ಎಎಫ್‌ಪಿ ಚಿತ್ರ
ನ್ಯೂ ಸೌಥ್‌ವೇಲ್‌ನಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು – ಎಎಫ್‌ಪಿ ಚಿತ್ರ   
""
""
""

ಪಂಬಾಬ್‌, ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ರಾಜಧಾನಿ ದೆಹಲಿಯ ವಾತಾವರಣ ಕಲುಷಿತಗೊಂಡು ಪ್ರತಿ ವರ್ಷವೂ ಜಾಗತಿಕ ಮಟ್ಟದ ಸುದ್ದಿಯಾಗುತ್ತದೆ. ಅಂಥದ್ದೇ ಸ್ಥಿತಿ ಆಗಾಗ ಆಸ್ಟ್ರೇಲಿಯಾದಲ್ಲೂ ಉಂಟಾಗಿದೆ. ಆದರೆ, ಕಾಡಿನ ಬೆಂಕಿಯಿಂದಾಗಿ ಅಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯ ಧಗೆಯಿಂದ ಒಣಗಿದ ಕುರುಚಲು ಕಾಡಿನ ಹುಲ್ಲು, ಪೊದೆಗಳಿಗೆ ಬೆಂಕಿ ಹತ್ತಿಕೊಂಡು, ನಿಧಾನವಾಗಿ ಅದು ವಿಸ್ತರಿಸುತ್ತಾ ಕಾಡಿಗೆ ಕಾಡೇ ಹೊತ್ತಿ ಉರಿಯುತ್ತಿದೆ. ಇದರಿಂದ ತಾಪಮಾನ ಏರುವುದು ಒಂದಾದರೆ, ವಿಪರೀತ ಹೊಗೆಯು ವಾತಾವರಣವನ್ನು ಸೇರಿಕೊಂಡು ಕಾಡಂಚಿನ ಜನರಿಗೆ ಉಸಿರಾಡುವುದೂ ಕಷ್ಟವಾಗುತ್ತಿದೆ.

ಕಳೆದ ಕೆಲವು ತಿಂಗಳಿಂದ ಆಸ್ಟ್ರೇಲಿಯಾದ ದಕ್ಷಿಣ ಕರಾವಳಿಯ ನ್ಯೂ ಸೌಥ್‌ವೇಲ್‌ ಹಾಗೂ ಕ್ವೀನ್ಸ್‌ಲ್ಯಾಂಡ್‌ ಸಮೀಪದ ಕಾಡು ಹೊತ್ತಿ ಉರಿಯುತ್ತಿದೆ. ಈ ಬೆಂಕಿಯನ್ನು ನಂದಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ. ಬೆಂಕಿ ನಿಯಂತ್ರಣಕ್ಕೆ ಬಾರದ ಕಾರಣ ಭೂಮಿಯ ತಾಪಮಾನದಲ್ಲಿ ಏರಿಕೆಯಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ADVERTISEMENT

ಬೆಂಕಿಗೇನು ಕಾರಣ?
ಬೇಸಿಗೆ ಮತ್ತು ಚಳಿಗಾಲದಲ್ಲಿ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕಾಡಿಗೆ ಬೆಂಕಿ ಹತ್ತಿಕೊಳ್ಳುವುದು ಸಾಮಾನ್ಯ. ಈ ವರ್ಷ ಅದು ಅನಿರೀಕ್ಷಿತವಾಗಿ ಬಂದಿದ್ದಲ್ಲದೆ ವಿಪರೀತ ವೇಗದಲ್ಲಿ ಹಬ್ಬಿಕೊಂಡಿದೆ. ‘ಹವಾಮಾನದಲ್ಲಾಗುತ್ತಿರುವ ಬದಲಾವಣೆಯು ಈ ಅವಘಡದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ.

ಕೆಲವೊಮ್ಮೆ ನೈಸರ್ಗಿಕ ಕಾರಣದಿಂದ ಬೆಂಕಿ ಹತ್ತಿಕೊಂಡರೆ, ಮಾನವನ ತಪ್ಪುಗಳಿಂದಲೂ ಕಾಡು ಹತ್ತಿ ಉರಿದದ್ದಿದೆ. ಸಿಡಿಲು ಬಡಿದು ಕಾಡಿಗೆ ಬೆಂಕಿ ಹತ್ತಿಕೊಂಡಿರುವ ಉದಾಹರಣೆಗಳು ಅನೇಕ ಇವೆ.

ಕೆಲವೊಮ್ಮೆ ಕಾಡಿನ ಅಂಚಿನ ಜನರು ತಮಗೆ ಅರಿವಿಲ್ಲದಂತೆಯೇ ಬೆಂಕಿಗೆ ಕಾರಣರಾಗುತ್ತಾರೆ. ಸೇದಿ ಎಸೆದ ಸಿಗರೇಟಿನ ತುಂಡು, ಕಾಡಿನ ಬೆಂಕಿಗೆ ಕಾರಣವಾಗುತ್ತದೆ. ಗಾಂಜಾ ಬೆಳೆಯ ರಕ್ಷಣೆಗಾಗಿ ಹಚ್ಚಿದ್ದ ಬೆಂಕಿಯು ವಿಸ್ತರಿಸಿ, 5,400 ಹೆಕ್ಟೇರ್‌ ಕಾಡು ನಾಶವಾದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಳೆದ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಬೆಂಕಿಗೆ ಆಹುತಿಯಾಗಿರುವ ಕಾಡಿನ ಅಂಚಿನ ಜನರು ಸುರಕ್ಷಿತ ಸ್ಥಳಗಳಿಗೆ ಹೋದರು –ಎಎಫ್‌ಪಿ ಚಿತ್ರ

ಅಪಾಯದಲ್ಲಿ ಜೀವನ
ಹೊಂಜಿನಿಂದ ನಮ್ಮ ದೆಹಲಿಯಲ್ಲಿ ಉಂಟಾಗುವಂಥದ್ದೇ ಪರಿಸ್ಥಿತಿ ಈಗ ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ ನಿರ್ಮಾಣವಾಗಿದೆ. ಈ ನಗರದ ಗಾಳಿಯ ಗುಣಮಟ್ಟವು ನಿಗದಿತ ಕನಿಷ್ಠ ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ‘ಸಿಡ್ನಿಯಿಂದ 39,000 ಅಡಿ ಎತ್ತರದವರೆಗೂ ಕಾಡಿನ ಬೆಂಕಿಯ ವಾಸನೆ ಹಬ್ಬಿದೆ. ಆಸ್ಟ್ರೇಲಿಯಾದ ಆಗಸದಲ್ಲಿ ಕಾಣುತ್ತಿರುವ ದಟ್ಟ ಹೊಂಜು, ಪರಿಸ್ಥಿತಿಯ ಭೀಕರತೆಯನ್ನು ತಿಳಿಸುತ್ತದೆ’ ಎಂದು ನಟ ಸ್ಯಾಮ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.

ಈವರೆಗೆ 27 ಲಕ್ಷ ಹೆಕ್ಟೇರ್‌ ಕಾಡು ಮತ್ತು ನೂರಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ. 18 ಮಂದಿಯನ್ನು ಬಲಿ ತೆಗೆದುಕೊಂಡಿದೆ. 50 ಕೋಟಿಗೂ ಹೆಚ್ಚು ಕಾಡು ಪ್ರಾಣಿಗಳು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸಾವಿರಾರು ಮಂದಿ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಧಾವಿಸಿದ್ದಾರೆ. ನ್ಯೂ ಸೌಥ್‌ ವೇಲ್‌ನಲ್ಲಿ ಒಂದು ವಾರದಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡು ಜನರು ಅನ್ನಾಹಾರಕ್ಕೂ ಪರದಾಡುವಂತಾಗಿದೆ. ನೂರಾರು ಪ್ರವಾಸಿಗರು ಹಾಗೂ ಸ್ಥಳೀಯ ಜನರನ್ನು ಸೇನೆಯವರು ರಕ್ಷಿಸಿದ್ದಾರೆ. ಹೊರರಾಷ್ಟ್ರಗಳಿಂದ ಬಂದವರು ಪ್ರವಾಸವನ್ನು ಮೊಟಕುಗೊಳಿಸಿ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ.

25 ಕೋಟಿ ಟನ್‌ ಇಂಗಾಲ
ಕಾಡಿನ ಬೆಂಕಿಯಿಂದಾಗಿ ವಿಪರೀತ ಪ್ರಮಾಣದ ಇಂಗಾಲದ ಆಕ್ಸೈಡ್‌ ವಾತಾವರಣವನ್ನು ಸೇರುತ್ತಿದೆ. ಒಂದು ಅಂದಾಜಿನ ಪ್ರಕಾರ ಈಗಾಗಲೇ 25 ಕೋಟಿ ಟನ್‌ ಇಂಗಾಲದ ಆಕ್ಸೈಡ್‌ ವಾತಾವರಣಕ್ಕೆ ಸೇರ್ಪಡೆಯಾಗಿದೆ. ಇದು 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಉತ್ಪಾದನೆಯಾದ ಒಟ್ಟಾರೆ ಇಂಗಾಲದ ಅಕ್ಸೈಡ್‌ನ ಅರ್ಧದಷ್ಟಾಗುತ್ತದೆ. ಇದು ಆತಂಕದ ಒಂದು ಕಾರಣ. ಇಂಗಾಲವನ್ನು ಹೀರಿ ವಾತಾವರಣವನ್ನು ಶುದ್ಧಗೊಳಿಸಬೇಕಾದ ಮರಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂಬುದು ಆತಂಕದ ಇನ್ನೊಂದು ಕಾರಣ.

ವಿಶ್ವದ ದೊಡ್ಡ ರಾಷ್ಟ್ರಗಳಲ್ಲಿ ಒಂದೆನಿಸಿದ ಆಸ್ಟ್ರೇಲಿಯಾದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಭೀಕರವಾದ ಬಿಸಿಗಾಳಿಯ ಅಪಾಯಕ್ಕೆ ಆ ದೇಶ ಸಿಲುಕಿಕೊಂಡಿದೆ. ದೇಶದ ಗರಿಷ್ಠ ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ ತಲುಪುವ ದಿನಗಳು ದೂರವಿಲ್ಲ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಪ್ರಧಾನಿ ವಿರುದ್ಧ ಆಕ್ರೋಶ
ದೇಶದಲ್ಲಿ ಇಷ್ಟೊಂದು ಗಂಭೀರ ಸ್ಥಿತಿ ನಿರ್ಮಾಣವಾಗಿದ್ದಾಗ, ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರು ಹವಾಯ್‌ಯಲ್ಲಿ ಕುಟುಂಬಸಹಿತವಾಗಿ ರಜಾಕಾಲ ಕಳೆಯುತ್ತಿದ್ದುದಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಡಿನ ಬೆಂಕಿಯ ಬಗ್ಗೆ ಮಾಹಿತಿ ನೀಡಲು ಪ್ರಧಾನಿಗೆ ಕರೆ ಮಾಡಿದಾಗ ಅದನ್ನು ಸ್ವೀಕರಿಸಲೂ ಅವರು ನಿರಾಕರಿಸಿದ್ದರು ಎಂಬ ಕಾರಣಕ್ಕೆ ಜನರು ಪ್ರಧಾನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಾಕ್ರೋಶದ ಬಿಸಿ ತಟ್ಟಿದ ಬಳಿಕ ಮಾರಿಸನ್‌ ಧಾವಿಸಿ ಬಂದರು.

ಬೆಂಕಿಯಿಂದಾಗಿ ತೀವ್ರ ಹಾನಿ ಅನುಭವಿಸಿದ್ದ ಪ್ರದೇಶವೊಂದಕ್ಕೆ ಭೇಟಿನೀಡಿದ್ದ ಮಾರಿಸನ್‌ ಅವರು ಅಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರ ಕೈಕುಲುಕಲು ಮುಂದಾದಾಗ, ಅವರು ಕೈ ಕುಲುಕಲು ನಿರಾಕರಿಸಿದ್ದಲ್ಲದೆ ‘ನಿನಗೆ ಇಲ್ಲಿ ವೋಟು ಸಿಗುವುದಿಲ್ಲ. ನೀನೊಬ್ಬ ಮೂರ್ಖ’ ಎಂದು ನಿಂದಿಸಿದ ವಿಡಿಯೊವೊಂದು ವೈರಲ್‌ ಆಗಿದೆ.

ಭಾರತ ಭೇಟಿ ರದ್ದು?: ಮಾರಿಸನ್‌ ಅವರು ಜ. 13 ರಿಂದ 16ರವರೆಗೆ ಭಾರತಕ್ಕೆ ಭೇಟಿನೀಡುವ ಕಾರ್ಯಕ್ರಮವಿತ್ತು. ಆದರೆ ಆ ಪ್ರವಾಸ ರದ್ದಾಗುವ ಸಾಧ್ಯತೆ ಇದೆ.

ಬೆಂಕಿಯಿಂದ ಆಗಿರುವ ಅನಾಹುತದ ವೀಕ್ಷಣೆಗೆ ಬಂದ ಪ್ರಧಾನಿ ಮಾರಿಸನ್‌ ಅವರ ಕೈಕುಲುಕಲು ಸ್ಥಳೀಯ ಮಹಿಳೆಯೊಬ್ಬರು ನಿರಾಕರಿಸಿದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.