ADVERTISEMENT

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಮೋದಿ ಜನಪ್ರಿಯ

ಭಾರತದ ಪ್ರಧಾನಿಗೆ ‘ಮೋದಿ ಅಮರ’ ಎನ್ನುವ ಅಡ್ಡಹೆಸರು

ಪಿಟಿಐ
Published 20 ಮಾರ್ಚ್ 2023, 13:21 IST
Last Updated 20 ಮಾರ್ಚ್ 2023, 13:21 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೀಜಿಂಗ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಜಾಲತಾಣಿಗರಲ್ಲಿ (ನೆಟಿಜನ್ಸ್) ‘ಮೋದಿ ಲಾಕ್ಸಿಯನ್’ ಅರ್ಥಾತ್ ‘ಮೋದಿ ಅಮರ’ ಎಂದೇ ಜನಪ್ರಿಯರಾಗಿದ್ದಾರೆ.

ಭಾರತ– ಚೀನಾದ ನಡುವೆ ಗಡಿವಿಷಯದ ಕುರಿತು ವಿವಾದವಿದ್ದರೂ ಮೋದಿ ಅವರನ್ನು ಚೀನಾದ ಜಾಲತಾಣಿಗರು ಅಂತರರಾಷ್ಟ್ರೀಯ ನಾಯಕನೆಂದೇ ಭಾವಿಸಿದ್ದಾರೆ ಎಂದು ಅಮೆರಿಕ ಮೂಲದ ‘ದ ಡಿಪ್ಲೊಮ್ಯಾಟ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಸಾಮಾಜಿಕ ಜಾಲತಾಣ ‘ಸಿನಾ ವೈಬೊ’ ಅನ್ನು ವಿಶ್ಲೇಷಿಸುವ, ಪತ್ರಕರ್ತ ಮು ಚುನ್‌ಶಾನ್ ಅವರು ಬರೆದಿರುವ ‘ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ’ ಎನ್ನುವ ಲೇಖನದಲ್ಲಿ, ‘ವಿಶ್ವದ ಪ್ರಮುಖ ದೇಶಗಳ ನಡುವೆ ಮೋದಿ ನೇತೃತ್ವದ ಭಾರತವು ಸಮತೋಲನವನ್ನು ಕಾಪಾಡಬಹುದು ಎಂದು ಚೀನಿಯರು ಭಾವಿಸುತ್ತಾರೆ’ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

‘ಚೀನಾದ ಅಂತರ್ಜಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಮೋದಿ ಲಾಕ್ಸಿಯನ್’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ‘ಲಾಕ್ಸಿಯನ್’ ಅಂದರೆ ಅದೃಷ್ಟದ ಸಾಮರ್ಥ್ಯವಿರುವ ಅಮರ ವ್ಯಕ್ತಿ ಎಂದರ್ಥ. ಮೋದಿ ಅವರು ಇತರ ನಾಯಕರಿಗಿಂತ ಭಿನ್ನ ಹಾಗೂ ವಿಸ್ಮಯಕರವಾದ ವ್ಯಕ್ತಿತ್ವ ಹೊಂದಿರುವವರು ಎಂದು ಚೀನಾದ ಜಾಲತಾಣಿಗರು ನಂಬುತ್ತಾರೆ’ ಎಂದೂ ಮು ಚುನ್‌ಶಾನ್ ಹೇಳಿದ್ದಾರೆ.

‘ರಷ್ಯಾ, ಅಮೆರಿಕ ಅಥವಾ ಇತರ ದೇಶಗಳೊಂದಿಗೆ ಭಾರತವು ಸೌಹಾರ್ದ ಸಂಬಂಧ ಹೊಂದಿದ್ದು, ಇದಕ್ಕೆ ಚೀನಾದ ಕೆಲವು ಜಾಲತಾಣಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಸಿನಾ ವೈಬೊ’ ಮಾಸಿಕ 58.2 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.